Breaking: 160 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಹಕ್ಕು ಮಂಡಿಸಿದ ನಿತೀಶ್ ಕುಮಾರ್
ಪಾಟ್ನಾ, ಆಗಸ್ಟ್ 9: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಮಂಗಳವಾರ ಪಾಟ್ನಾದ ರಾಜಭವನದಲ್ಲಿ ನಡೆದ ಸಭೆಯ ನಂತರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್, ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಟ್ವೀಟ್ ಮಾಡಿದ್ದಾರೆ. "ನಿತೀಶ್ ಜಿ ಮುಂದೆ ಸಾಗಿ. ದೇಶ ನಿಮಗಾಗಿ ಕಾಯುತ್ತಿದೆ," ಎಂದು ಬರೆದುಕೊಂಡಿದ್ದಾರೆ.
ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ ನಿತೀಶ್ ಕುಮಾರ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ 160 ಶಾಸಕರ ಬೆಂಬಲ ಪತ್ರವನ್ನು ಸಹ ಸಲ್ಲಿಸಿದ್ದು, ನೂತನ ಸರ್ಕಾರ ರಚನೆಯ ಬಗ್ಗೆ ರಾಜ್ಯಪಾಲರಿಗೆ ಪತ್ರವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಜೆಡಿಯು ತೊರೆದ ಆರ್‌ಸಿಪಿ ಸಿಂಗ್: ಬಿಹಾರದಲ್ಲಿ ಜೆಡಿಯುನ ಮಾಜಿ ಸದಸ್ಯ ಆರ್‌ಸಿಪಿ ಸಿಂಗ್ ಪಕ್ಷ ತೊರೆಯುವಿಕೆ ನಂತರದಲ್ಲಿ ರಾಜಕೀಯ ಹೈಡ್ರಾಮಾ ಶುರುವಾಯಿತು. ಆರ್‌ಸಿಪಿ ಸಿಂಗ್ ಕೇಂದ್ರ ಸಚಿವ ಅಮಿತ್ ಶಾ ಪ್ರತಿನಿಧಿ ಎಂದು ನಿತೀಶ್ ಕುಮಾರ್ ದೂಷಿಸಿದ್ದರು.
ಭ್ರಷ್ಟಾಚಾರದ ಆರೋಪ ಹಿನ್ನೆಲೆ ವಾರಾಂತ್ಯದಲ್ಲಿ ಆರ್‌ಸಿಪಿ ಸಿಂಗ್ ಜೆಡಿಯು ತೊರೆದರು. ಕಳೆದ 2017ರಲ್ಲಿ ಸಿಂಗ್ ಅವರು ನಿತೀಶ್ ಕುಮಾರ್ ಪಕ್ಷದ ಪ್ರತಿನಿಧಿಯಾಗಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿದರು. ಕೇಂದ್ರದಲ್ಲಿ ಪಕ್ಷಕ್ಕೆ ಒಂದೇ ಒಂದು ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ ಎಂದು ನಿತೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications