ಚೀನಾಗೆ ಸಾಗಿಸುತ್ತಿದ್ದ 50 ಮಾನವ ಅಸ್ಥಿಪಂಜರ ರೈಲ್ವೆ ಪೊಲೀಸರ ವಶಕ್ಕೆ
ಸರಕಾರಿ ರೈಲ್ವೆ ಪೊಲೀಸರು ಮಂಗಳವಾರ ಶಂಕಿತ ಶವ ಕಳ್ಳ ಸಾಗಣೆದಾರನನ್ನು ಬಂಧಿಸಿದ್ದು, ಆತನಿಂದ 50 ಮಾನವ ಅಸ್ಥಿಪಂಜರಗಳನ್ನು ವಶಪಡಿಸಿಕೊಂಡ ಘಟನೆ ಬಿಹಾರದ ಸರಣ್ ಜಿಲ್ಲೆಯ ಚಪ್ರಾ ರೈಲು ನಿಲ್ದಾಣದಲ್ಲಿ ನಡೆದಿದೆ. ಬಲಿಯಾ-ಸೀಲ್ದಾ ಎಕ್ಸ್ ಪ್ರೆಸ್ ನಲ್ಲಿ ಸಂಚರಿಸುತ್ತಿದ್ದ ಆರೋಪಿಯ ಹೆಸರು ಸಂಜಯ್ ಪ್ರಸಾದ್.
ಪೊಲೀಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸುವಂತೆ, ಅಸ್ಥಿಪಂಜರಗಳನ್ನು ಉತ್ತರಪ್ರದೇಶದ ಬಲಿಯಾದಿಂದ ತರಲಾಗುತ್ತಿತ್ತು. ಅವುಗಳನ್ನು ಭೂತಾನ್ ಮಾರ್ಗವಾಗಿ ಚೀನಾಗೆ ಕಳ್ಳ ಸಾಗಣೆ ಮಾಡಲು ಯೋಜಿಸಲಾಗಿತ್ತು. ಪ್ರಸಾದ್ ನ ವಿಚಾರಣೆ ನಡೆಸಲಾಗುತ್ತಿದೆ ಹಾಗೂ ಆತನ ಮೊಬೈಲ್ ಕಾಂಟ್ಯಾಕ್ಟ್ಸ್ ಮಾಹಿತಿಗಳನ್ನು ಸಹ ಶೋಧಿಸಲಾಗುತ್ತಿದೆ.
ಬಂಧಿತನಿಂದ ನೇಪಾಳ ಹಾಗೂ ಭೂತಾನ್ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಹಲವು ಎಟಿಎಂ ಕಾರ್ಡ್ ಗಳು, ನೇಪಾಳದ ಮೊಬೈಲ್ ನಂಬರ್ ಗಳಿದ್ದ ಸಿಮ್ ಕಾರ್ಡ್ ಗಳನ್ನು ಸಹ ಜಪ್ತಿ ಮಾಡಿಕೊಳ್ಳಲಾಗಿದೆ.

ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಅಸ್ಥಿಪಂಜರಕ್ಕೆ ಭಾರೀ ಬೇಡಿಕೆ ಇದೆ. ಈ ಅಸ್ಥಿಪಂಜರ ಕಳ್ಳ ಸಾಗಣೆಯಲ್ಲಿ ಭಾಗಿಯಾಗಿರುವ ಇತರರು ಯಾರು ಎಂಬ ಬಗ್ಗೆ ಬಂಧಿತನ ವಿಚಾರಣೆ ನಡೆಸಲಾಗುವುದು. ನೇಪಾಳ ಹಾಗೂ ಭೂತಾನ್ ನಲ್ಲಿ ಆತನಿಗೆ ಯಾರ ಜತೆ ನಂಟಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
2009ರಲ್ಲಿ ಬಸ್ ನಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 67ಕ್ಕೂ ಹೆಚ್ಚು ಮಾನವ ತಲೆ ಬುರುಡೆಗಳನ್ನು ಸರಣ್ ಪೊಲೀಸರು ವಶಕ್ಕೆ ಪಡೆದಿದ್ದರು. 2004ರ ಏಪ್ರಿಲ್ ನಲ್ಲಿ ಗಯಾದ ಫಲ್ಗು ನದಿಯ ಬಳಿ 1000 ತಲೆ ಬುರುಡೆ ಹಾಗೂ ಮಾನವ ದೇಹದ ಇತರ ಭಾಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.












Click it and Unblock the Notifications