ಗೋವಾ ಪ್ರಣಾಳಿಕೆ: 3 ಉಚಿತ ಗ್ಯಾಸ್ ಸಿಲಿಂಡರ್ ಭರವಸೆ ನೀಡಿದ ಬಿಜೆಪಿ
ಪಣಜಿ, ಫೆಬ್ರವರಿ 08: ಮುಂಬರುವ ಗೋವಾ ವಿಧಾನಸಭೆ ಚುನಾವಣೆ 2022ಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕರಾವಳಿ ರಾಜ್ಯದಲ್ಲಿ ಬಿಜೆಪಿ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದರೆ ಏನು ಮಾಡಲಿದೆ ಎಂಬ ಬಗ್ಗೆ ಪ್ರಣಾಳಿಕೆಯನ್ನು ವಿವರಿಸುತ್ತಾ ಹೇಳಿದ್ದಾರೆ.
"ಗೋವಾದ ಭವಿಷ್ಯವನ್ನು ಸಶಕ್ತಗೊಳಿಸುವುದು, ಪ್ರವಾಸೋದ್ಯಮ ಚಟುವಟಿಕೆಗಳನ್ನು ಹೆಚ್ಚಿಸುವುದು, ಕಾನೂನು ಗಣಿಗಾರಿಕೆಯನ್ನು ಮರುಸ್ಥಾಪಿಸುವುದು ಮತ್ತು ಬಹು ಆಯಾಮದ ಬಡತನವನ್ನು ತೊಡೆದುಹಾಕುವುದು" ಎಂಬ ವಿಚಾರವನ್ನು ಹೊಂದಿರುವ ಗೋವಾದ ಪಕ್ಷದ 'ಸಂಕಲ್ಪ ಪತ್ರ'ವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತನವಡೆ ಉಪಸ್ಥಿತರಿದ್ದರು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮುಂದಿನ 10 ವರ್ಷಗಳಲ್ಲಿ ಗೋವಾವನ್ನು 50 ಶತಕೋಟಿ ಯುಎಸ್‌ಡಿ ಆರ್ಥಿಕತೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದೆ. ಎಲ್ಲರಿಗೂ ವಸತಿ ಒದಗಿಸುವುದರೊಂದಿಗೆ ಪ್ರತಿ ಮನೆಗೆ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಒದಗಿಸುವ ಭರವಸೆಯನ್ನು ಕೂಡಾ ನೀಡಿದೆ.

ಬಿಜೆಪಿ ಪ್ರಣಾಳಿಕೆಯಲ್ಲಿ ಬೇರೆ ಏನಿದೆ?
ಆಡಳಿತ ಪಕ್ಷವು, "ನಾವು ನಿರಂತರ ಪ್ರಯತ್ನಗಳ ಮೂಲಕ ಗೋವಾವನ್ನು ಬೆಳವಣಿಗೆಯ ಪಥದಲ್ಲಿ ಮುನ್ನಡೆಸುತ್ತೇವೆ. ನಮ್ಮ ಸರ್ಕಾರ ಮುಂದಿನ ಹತ್ತು ವರ್ಷಗಳಲ್ಲಿ ರಾಜ್ಯವು 50 ಶತಕೋಟಿ ಯುಎಸ್‌ಡಿ ಆರ್ಥಿಕತೆಯನ್ನಾಗಿ ಮಾಡಲಿದೆ," ಎಂದು ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಇನ್ನು ಮುಂದಿನ ಐದು ವರ್ಷಗಳಲ್ಲಿ ಕರಾವಳಿ ರಾಜ್ಯದಲ್ಲಿ ಬಡತನವನ್ನು ಸಂಪೂರ್ಣವಾಗಿ ತೊಡೆದುಹಾಕುವುದಾಗಿ ಭರವಸೆ ನೀಡಿದೆ. ಗೋವಾ ಖನಿಜ ಅಭಿವೃದ್ಧಿ ನಿಗಮದ ಮೂಲಕ ಅಧಿಕಾರಕ್ಕೆ ಮರಳಿದ ಆರು ತಿಂಗಳೊಳಗೆ ರಾಜ್ಯಕ್ಕೆ ಪ್ರಮುಖ ಆದಾಯದ ಮೂಲವಾದ ಗಣಿಗಾರಿಕೆ ಚಟುವಟಿಕೆಗಳನ್ನು (2018 ರಿಂದ ಸ್ಥಗಿತಗೊಳಿಸಲಾಗಿದೆ) ಪುನಃಸ್ಥಾಪಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.
ಪ್ರವಾಸಿಗರ ಆಗಮನದ ಸಂಖ್ಯೆಯನ್ನು ದ್ವಿಗುಣಗೊಳಿಸಲು ಪಕ್ಷದ ಪ್ರತಿಜ್ಞೆ
ಪ್ರವಾಸಿಗರ ನಾಡದ ಗೋವಾದಲ್ಲಿ ಬಿಜೆಪಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಭರವಸೆಯನ್ನು ನೀಡಿದೆ. ಒಳನಾಡು ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ ಮತ್ತು ಪರಂಪರೆ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುತ್ತದೆ. ಸಾಹಸ ಕ್ರೀಡೆಗಳು ಮತ್ತು ಬೀಚ್ ಪ್ರವಾಸೋದ್ಯಮದ ಪ್ರಸ್ತುತ ಮೂಲಸೌಕರ್ಯವನ್ನು ಹೆಚ್ಚಳ ಮಾಡಲಾಗುತ್ತದೆ. ಈ ಮೂಲಕ ಮುಂದಿನ ಐದು ವರ್ಷಗಳಲ್ಲಿ ರಾಜ್ಯಕ್ಕೆ ವಾರ್ಷಿಕ ಪ್ರವಾಸಿಗರ ಆಗಮನದ ಸಂಖ್ಯೆಯನ್ನು ದ್ವಿಗುಣಗೊಳಿಸಲು ಪಕ್ಷವು ಪ್ರತಿಜ್ಞೆ ಮಾಡಿದೆ. ಪ್ರವಾಸೋದ್ಯಮದಲ್ಲಿ ಗೋವಾವನ್ನು ಏಷ್ಯಾದ ಕೇಂದ್ರವನ್ನಾಗಿ ಮಾಡಲು ಆಡಳಿತ ಪಕ್ಷ ಬಿಜೆಪಿ ತನ್ನ ಮುಂದಿನ ವಿಧಾನಸಭೆ ಚುಣಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಕ್ರೀಡಾ ರಂಗದಲ್ಲಿ, ಗೋವಾದಿಂದ ಭಾರತಕ್ಕೆ ಒಲಂಪಿಕ್ ಚಿನ್ನದ ಪದಕವನ್ನು ಅಲಂಕರಿಸಲು ಮಿಷನ್ ಗೋಲ್ಡ್ ಕೋಸ್ಟ್ ಅನ್ನು ಪ್ರಾರಂಭಿಸುವುದಾಗಿ ಬಿಜೆಪಿ ಭರವಸೆ ನೀಡಿದೆ. ಮಹಿಳಾ ಮತದಾರರನ್ನು ಓಲೈಸುವ ತಂತ್ರವನ್ನು ಕೂಡಾ ಗೋವಾ ಬಿಜೆಪಿ ಮಾಡಿದೆ. ಗೃಹಿಣಿಯರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಗೋವಾದ ಪ್ರತಿ ಮನೆಗೆ (ಒಂದು ವರ್ಷದಲ್ಲಿ) ಮೂರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿ ಹೇಳಿದೆ. ನಾವು ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಗೋವಾಗಳಿಗೆ ಉತ್ತಮ ಗುಣಮಟ್ಟದ ವಸತಿಗಳನ್ನು ಒದಗಿಸುತ್ತೇವೆ ಮತ್ತು ಅರ್ಹ ಕುಟುಂಬಗಳಿಗೆ ಮಹಿಳೆಯರಿಗೆ ಎರಡು ಶೇಕಡಾ ಮತ್ತು ಪುರುಷರಿಗೆ ಶೇಕಡಾ 4 ರ ಬಡ್ಡಿದರದಲ್ಲಿ ಗೃಹ ಸಾಲವನ್ನು ಒದಗಿಸುತ್ತೇವೆ. ಪ್ಲಾಟ್‌ಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಕೂಡಾ ಪ್ರಣಾಳಿಕೆಯಲ್ಲಿ ಬಿಜೆಪಿ ಸೇರಿಸಿದೆ.
ಇನ್ನು ಬಿಜೆಪಿ ಅಧಿಕಾರಕ್ಕೆ ಮರಳಿದ ನಂತರ, ಕರಾವಳಿ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಯಂತ್ರಿಸಲು ಅದರ ಮೇಲಿನ ತೆರಿಗೆಗಳ ಮೇಲೆ ಮಿತಿಯನ್ನು ಹಾಕುತ್ತದೆ ಎಂದು ಬಿಜೆಪಿ ಹೇಳಿದೆ. ಫೆಬ್ರವರಿ 14 ರಂದು ಗೋವಾ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications