ನಿರ್ಭಯ ಅಪರಾಧಿಗಳಿಗೆ ಮಾ.3ರಂದು ಗಲ್ಲು ಜಾರಿ ಇಲ್ಲ?
ನವದೆಹಲಿ, ಮಾರ್ಚ್ 02 : ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿ ಪವನ್ ಗುಪ್ತ ಸಲ್ಲಿಸಿದ್ದ ಕ್ಯುರೆಟೀವ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಮಾರ್ಚ್ 3ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ಡೆತ್ ವಾರೆಂಟ್ ಜಾರಿಗೊಳಿಸಲಾಗಿದೆ.
ನಿರ್ಭಯ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಂಗಳವಾರ ಮರಣದಂಡನೆ 2ಜಾರಿಗೊಳಿಸುವ ಸಾಧ್ಯತೆ ಕಡಿಮೆ ಇದೆ. ಅಕ್ಷಯ್ ಸಿಂಗ್ ರಾಷ್ಟ್ರಪತಿಗಳ ಮುಂದೆ ಸಲ್ಲಿಸಿರುವ 2ನೇ ಕ್ಷಮಾದಾನ ಅರ್ಜಿ ಇನ್ನೂ ಇತ್ಯರ್ಥವಾಗದೇ ಬಾಕಿ ಇದೆ.
ಅಪರಾಧಿಗಳಾದ ಅಕ್ಷಯ್ ಮತ್ತು ಪವನ್ ದೆಹಲಿ ಹೈಕೋರ್ಟ್‌ಗೆ ಮಾರ್ಚ್ 3ರ ಡೆತ್ ವಾರೆಂಟ್‌ಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯೂ ಬಾಕಿ ಇದೆ. ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಕೇಂದ್ರ ಸರ್ಕಾರ ಕೋರಿರುವ ಅರ್ಜಿಯೂ ಸುಪ್ರೀಂನಲ್ಲಿ ಬಾಕಿ ಇದೆ.

ಕಾನೂನು ತಜ್ಞರ ಪ್ರಕಾರ ಎಲ್ಲಾ ಅರ್ಜಿಗಳು ಇತ್ಯರ್ಥವಾಗುವ ತನಕ ಅಪರಾಧಿಗಳನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ. ಆದ್ದರಿಂದ, ಮಾರ್ಚ್ 3ರ ಮಂಗಳವಾರ ಅಪರಾಧಿಗಳನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸುವ ಸಾಧ್ಯತೆ ಕಡಿಮೆ.
ಪ್ರಕರಣದ ಒಬ್ಬ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ರಾಷ್ಟ್ರಪತಿಗಳ ಮುಂದೆ 2ನೇ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಇತ್ಯರ್ಥವಾಗುವ ತನಕ ಗಲ್ಲು ಶಿಕ್ಷೆ ಜಾರಿಗೊಳಿಸಬಾರದು ಎಂದು ಪಟಿಯಾಲಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ಅಪರಾಧಿಗಳಿಗೆ ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸಲು ತಯಾರಿ ನಡೆಸಲಾಗಿದೆ. ಈಗಾಗಲೇ ಎರಡು ಬಾರಿ ಡೆತ್ ವಾರೆಂಟ್ ನೀಡಿ ಗಲ್ಲು ಶಿಕ್ಷೆ ಮುಂದಕ್ಕೆ ಹಾಕಲಾಗಿತ್ತು. ಮಾರ್ಚ್ 3ರಂದು ಮತ್ತೊಂದು ಡೆತ್ ವಾರೆಂಟ್ ಜಾರಿಗೊಳಿಸಲಾಗಿದೆ.












Click it and Unblock the Notifications