ಪ್ರಧಾನಿ ಸಿಂಗ್ ಔತಣಕ್ಕೆ ರಾಹುಲ್ ಗೈರು ಹಾಜರೇಕೆ?
ನವದೆಹಲಿ, ಮೇ 15: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರು ಬುಧವಾರ ಆಯೋಜಿಸಿದ್ದ ಔತಣ ಕೂಟದಲ್ಲಿ ಗೈರು ಜಾಹರಾಗಿ ಹಲವರ ಹುಬ್ಬೇರುವಂತೆ ಮಾಡಿದ್ದಾರೆ.
ಮುಖ್ಯವಾಗಿ, exit mode ನಲ್ಲಿರುವ ಹಾಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಗೌರವಾರ್ಥ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮ್ಮ 10 ಜನಪಥ್ ನಿವಾಸದಲ್ಲಿ ಆಯೋಜಿಸಿದ್ದ ಆತ್ಮೀಯ ಸಮಾರಂಭ ಇದಾಗಿತ್ತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸಂಪುಟ ಸಚಿವರು, ಪ್ರತಿಪಕ್ಷದ ನಾಯಕರು ಬೀಳ್ಕೊಡುಗೆ ಸಮಾರಂಭದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ 10 ವರ್ಷ ಆಡಳಿತ ನಡೆಸಿದ ಪ್ರಧಾನಿಯವರಿಗೆ ಸೋನಿಯಾ ಅವರು ಸ್ಮರಣಿಕೆಯೊಂದನ್ನು ನೀಡಿ ಶುಭಾಶಯ ಕೋರಿದರು. [ರಾಹುಲ್ ಗೈರು ಹಾಜರೇಕೆ?]

ಆದರೆ ರಾಹುಲ್ ಅನುಪಸ್ಥಿತಿ ಎದ್ದು ಕಾಣುವಂತಿತ್ತು. ಹಾಲಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲುವುದರ ಸುಳಿವು ಸಿಕ್ಕಿ ರಾಹುಲ್ ಸಮಾರಂಭದಿಂದ ವಿಮುಖರಾದರಾ? ಎಂಬ ಪ್ರಶ್ನೆ ಕಾಡತೊಡಗಿದೆ. ಈ ಮಧ್ಯೆ ತಮ್ಮ ಅನುಪಸ್ಥಿತಿ ಬಗ್ಗೆ ನಾನಾ ವ್ಯಾಖ್ಯಾನಗಳು ವ್ಯಕ್ತವಾಗುತ್ತಿದ್ದಂತೆ 'ತಾವು ದಿಲ್ಲಿಯಲ್ಲಿರದ ಕಾರಣ ಬುಧವಾರದ ಔತಣಕ್ಕೆ ಬರಲಾಗದು ಎಂದು ಶನಿವಾರವೇ ಪ್ರಧಾನಿಯನ್ನು ಭೇಟಿಯಾಗಿ ತಿಳಿಸಿದ್ದೆ' ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.
ನಾನ್ಸೆನ್ಸ್ ಪ್ರಕರಣದ ಹಿನ್ನೆಲೆ: (ಪಿಎಂ ಸಿಂಗ್ ಸರಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ರಾಹುಲ್)
ಆದರೆ ಕಳೆದ ಸೆಪ್ಟೆಂಬರಿನಲ್ಲಿ ಪ್ರಧಾನಿ ಸಿಂಗ್ ಅವರು ವಿದೇಶದಲ್ಲಿದ್ದಾಗ 'ನಾನ್ಸೆನ್ಸ್' ಎಂದು ಜರಿಯುತ್ತಾ ಲೋಕಪಾಲ್ ವಿಧೇಯಕ ಕುರಿತಾದ ಆರ್ಡಿನೆನ್ಸ್ ಅನ್ನು ಮಾಧ್ಯಮಗಳ ಮುಂದೆ ಲೈವ್ ನಲ್ಲಿ ಪರಪರನೆ ಹರಿದುಹಾಕಿದ್ದರು. ಅದನ್ನು ಕೇಳಿ ಪ್ರಧಾನಿ ಸಿಂಗ್ ವಿದೇಶದಿಂದಲೇ ತಮ್ಮ ರಾಜೀನಾಮೆ ಪತ್ರ ರವಾನಿಸಿ ದಾಖಲೆ ನಿರ್ಮಿಸುವ mode ನಲ್ಲಿದ್ದರು ಎಂಬ ಸತ್ಯವನ್ನು ಅವರ ಪುತ್ರಿ ಬಹಿರಂಗಪಡಿಸಿದ್ದರು ಎಂದು ಇತ್ತೀಚೆಗೆ ವರದಿಯಾಗಿತ್ತು. ಹಾಗಾಗಿ ಪ್ರಧಾನಿಯನ್ನು ತೀವ್ರವಾಗಿ ಮುಜುಗರಕ್ಕೀಡುಮಾಡಿದ್ದ ರಾಹುಲ್ ಗಾಂಧಿ ಸಾರ್ವಜನಿಕವಾಗಿ ನೇರ ಭೇಟಿಯಾಗಲು ಇಚ್ಛಿಸದೆ ಔತಣ ತಪ್ಪಿಸಿದರು ಎಂಬ ಮಾತೂ ಈಗ ಚಾಲ್ತಿಗೆ ಬಂದಿದೆ.












Click it and Unblock the Notifications