ಕೃಷಿ ಕಾಯ್ದೆ ವಾಪಾಸ್: 'ಸತ್ಯ, ನ್ಯಾಯ ಹಾಗೂ ಅಹಿಂಸೆಗೆ ಜಯ'
ನವವದೆಹಲಿ, ನವೆಂಬರ್ 19: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಹಂಗಾಮಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, "ಇಂದು ಸತ್ಯ, ನ್ಯಾಯ ಹಾಗೂ ಅಹಿಂಸೆಗೆ ಜಯ ಲಭಿಸಿದೆ," ಎಂದು ಹೇಳಿದ್ದಾರೆ.
ಈ ಬಗ್ಗೆ ಶುಕ್ರವಾರ ಮಾತನಾಡಿದ ಸೋನಿಯಾ ಗಾಂಧಿ, "ಸುಮಾರು 700 ರೈತರ ಬಲಿದಾನಕ್ಕೆ ಇಂದು ಸಫಲತೆ ದೊರೆತಿದೆ. ಸತ್ಯ, ನ್ಯಾಯ ಹಾಗೂ ಅಹಿಂಸೆಗೆ ಇಂದು ಜಯ ಲಭಿಸಿದೆ," ಎಂದಿದ್ದಾರೆ. "ರೈತರು ಹಾಗೂ ಕಾರ್ಮಿಕರ ವಿರುದ್ಧ ಸಂಚು ಹೂಡಿದ್ದವರ ಶಕ್ತಿಯು ಇಂದು ಸೋತಿದೆ. ಹಾಗೆಯೇ ಸರ್ವಾಧಿಕಾರದ ದುರಹಂಕಾರವು ಇಂದು ಸೋತಿದೆ. ಕೃಷಿ ಹಾಗೂ ಜನ ಜೀವನದ ವಿರುದ್ಧ ಮಾಡಲಾಗಿದ್ದ ಸಂಚು ಇಂದು ಸೋಲು ಕಂಡಿದೆ. ಇಂದು ಅನ್ನದಾತರು ಗೆಲುವು ಕಂಡಿದ್ದಾರೆ," ಎಂದು ಕೂಡಾ ಸೋನಿಯಾ ಗಾಂಧಿ ತಿಳಿಸಿದರು.
'ಚುನಾವಣೆ ಹಿನ್ನೆಲೆ ಕೃಷಿ ಕಾಯ್ದೆ ವಾಪಾಸ್ ಪಡೆದ ಪ್ರಧಾನಿ ಮೋದಿ'
"ಪ್ರಜಾಪ್ರಭುತ್ವದಲ್ಲಿ ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗಲೂ ವಿರೋಧ ಪಕ್ಷ ಹಾಗೂ ಸಂಬಂಧ ಪಟ್ಟವರ ಜೊತೆ ಚರ್ಚೆ ನಡೆಸಿ ಬಳಿಕ ನಿರ್ಧಾರವನ್ನು ಕೈಗೊಳ್ಳಬೇಕು. ಈ ಸಂದರ್ಭದಲ್ಲಿ ಮೋದಿ ಸರ್ಕಾರಕ್ಕೆ ಭವಿಷ್ಯದ ಬಗ್ಗೆ ಸ್ವಲ್ಪವಾದರೂ ಬುದ್ಧಿಯನ್ನು ಕಲಿತಿದೆ ಎಂದು ನಾನು ಭಾವಿಸುತ್ತೇನೆ," ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಟಾಂಗ್ ನೀಡಿದ್ದಾರೆ.
"ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದಂತೆ ರೈತರಿಗೆ ಶೇಕಡ 50 ರಷ್ಟು ಲಾಭದ ಪಾವತಿಯನ್ನು ನೀಡದಿರುವುದು ಇರಬಹುದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳವಾಗಿರಲಿ, ಮೂರು ಕಪ್ಪು ಕೃಷಿ ಕಾನೂನುಗಳು ಆಗಿರಲಿ, ಎಲ್ಲವೂ ಸೋತಿದೆ," ಎಂದು ತಿಳಿಸಿದ್ದಾರೆ. ಇನ್ನು ಈ ಸಂದರ್ಭದಲ್ಲೇ ಸರ್ಕಾರದ ಎನ್‌ಎಸ್‌ಒ ಅಂಕಿ ಅಂಶಗಳನ್ನು ಉಲ್ಲೇಖ ಮಾಡಿದ ಸೋನಿಯಾ ಗಾಂಧಿ, "ಒಬ್ಬ ರೈತನ ಸರಾಸರಿ ಆದಾಯ ದಿನಕ್ಕೆ 27 ರೂ ಆಗಿದ್ದರೆ, ಪ್ರತಿಯೊಬ್ಬರ ಸರಾಸರಿ ಸಾಲವು 74,000 ರೂಪಾಯಿ ಆಗಿದೆ," ಎಂದು ಹೇಳಿದರು.
'ಗುರುನಾನಕ್ರ ಬಕ್ಷೀಸು': ಕೃಷಿ ಕಾಯ್ದೆ ವಿರೋಧಿಸಿ ಸಚಿವ ಸ್ಥಾನ ತೊರೆದಿದ್ದ ಹರಸಿಮ್ರತ್ ಕೌರ್
ಇಂದು ಮುಂಜಾನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ನಾನು ದೇಶಕ್ಕೆ ಕ್ಷಮೆಯಾಚಿಸುತ್ತೇನೆ. ನನ್ನ ಸರಕಾರ ರೈತರಿಗೆ ನೆರವಾಗಲು ಅವರನ್ನು ಸ್ವಾವಲಂಬಿಗಳನ್ನಾಗಿಸುವ ಅನೇಕ ನಿರ್ಧಾರಗಳಿಗೆ ಮುಂದಾಗಿದೆ. ಈ ಹಿನ್ನೆಲೆ ಕೃಷಿ ಕಾಯ್ದೆಯನ್ನು ಜಾರಿ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ ಅದನ್ನು ಕೆಲ ವರ್ಗದ ಜನರ ಅರ್ಥ ಮಾಡಿಕೊಳ್ಳಲು ವಿಫಲವಾಗಿ, ದಂಧೆ ಎಬ್ಬಿಸುತ್ತಿದ್ದಾರೆ. ಉರಿಯುತ್ತಿರುವ ದೀಪವಷ್ಟೇ ಕೇಂದ್ರ ಸರ್ಕಾರ ರೈತರಿಗಾಗಿ ಕೆಲಸ ಮಾಡುತ್ತಿದೆ. ಈ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯಲು ನಾವು ನಿರ್ಧಾರ ಮಾಡಿದ್ದೇವೆ ಎಂದು ಇಡೀ ದೇಶಕ್ಕೆ ನಾನು ತಿಳಿಸಲು ಇಚ್ಛಿಸುತ್ತೇನೆ. ಈ ತಿಂಗಳ ಕೊನೆಯಲ್ಲಿ ನಡೆಯುವ ಸಂಸತ್ ಅಧಿವೇಶನದಲ್ಲಿ ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ," ಎಂದು ಘೋಷಣೆ ಮಾಡಿದ್ದಾರೆ.
ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ ಸೋನಿಯಾ
ಕಾಂಗ್ರೆಸ್‌ನ ಹಂಗಾಮಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ನಿರಂತರವಾಗಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರವನ್ನು "ಅಹಂಕಾರ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. "ರೈತರು ಬಳಲುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ದರ್ಪವನ್ನು ತೋರುತ್ತಿದೆ," ಎಂದು ಈ ಹಿಂದೆ ಹೇಳಿದ್ದ ಸೋನಿಯಾ ಗಾಂಧಿ, ಕೃಷಿ ಕಾಯ್ದೆಯನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹ ಮಾಡಿದ್ದರು. "ಮೋದಿ ಸರ್ಕಾರ ತನ್ನ ಅಹಂಕಾರವನ್ನು ಬಿಟ್ಟು ಕೃಷಿ ಕಾಯ್ದೆಯನ್ನು ವಾಪಾಸ್ ಪಡೆಯಬೇಕು," ಎಂದು ನಿರಂತರವಾಗಿ ಆಗ್ರಹ ಮಾಡುತ್ತಿದ್ದರು.
(ಒನ್‌ಇಂಡಿಯಾ ಸುದ್ದಿ)