ಪ್ರಣಬ್ ಮಾತು, ಆರೆಸ್ಸೆಸ್ಸಿಗೆ ಛಾಟಿ ಏಟು: ಪಿ.ಚಿದಂಬರಂ
ನವದೆಹಲಿ, ಜೂನ್ 08: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಡಿದ ಮಾತು ಆರೆಸ್ಸೆಸ್ಸಿಗರಿಗೆ ಛಾಟಿ ಏಟು ಎಂದು ಮಾಜಿ ವಿತ್ತ ಸಚಿವ, ಕಾಂಗ್ರೆಸ್ ಮುಖಂಡ ಪಿ.ಚಿದಂಬಂರಂ ಹೇಳಿದ್ದಾರೆ.
"ಕಾಂಗ್ರೆಸ್ ಸಿದ್ಧಾಂತದಲ್ಲಿರುವ ಉತ್ತಮ ಅಂಶಗಳನ್ನು ಎತ್ತಿಹಿಡಿಯುವ ಮೂಲಕ, ಆರೆಸ್ಸೆಸ್ ಸಿದ್ಧಾಂತದಲ್ಲಿರುವ ದೋಷಗಳನ್ನೂ ಪ್ರಣಬ್ ಮುಖರ್ಜಿ ತೋರಿಸಿಕೊಟ್ಟಿದ್ದಾರೆ. ಆರೆಸ್ಸೆಸ್ ಸಿದ್ಧಾಂತದಲ್ಲಿ ದೋಷವಿದೆ ಎಂಬುದನ್ನು ತಿಳಿಸುವುದಕ್ಕೆ ಅವರಾಡಿದ ವಿಭಿನ್ನ ಶೈಲಿ ಮಾತುಗಳನ್ನು ಕಂಡು ಸಂತಸವಾಯಿತು" ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಮೂರನೇ ವರ್ಷದ ಶಿಕ್ಷಾ ವರ್ಗ್ ನಲ್ಲಿ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗಿಟ್ಟು ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಣಬ್ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಆದರೆ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಪ್ರಣಬ್ ಮುಖರ್ಜಿ ಸಂಘದ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಅವರನ್ನು ಭಾರತ ಮಾತೆಯ ಹೆಮ್ಮೆಯ ಪುತ್ರ ಎಂದು ಕರೆದರಲ್ಲದೆ, ವಿವಿಧತೆಯಲ್ಲಿ ಏಕತೆ ನಮ್ಮ ದೊಡ್ಡ ಶಕ್ತಿ ಎಂದು ಭಾರತವನ್ನು ಹಾಡಿ ಹೊಗಳಿದ್ದರು. ಜುನ್ 7 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮ ನಡೆದಿತ್ತು.












Click it and Unblock the Notifications