ನಿರ್ಭಯ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ವಿಳಂಬ
ನವದೆಹಲಿ, ಜನವರಿ 15 : ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿ ವಿಳಂಬವಾಗಲಿದೆ. ಜನವರಿ 22ರಂದು ಗಲ್ಲಿಗೇರಿಸಲು ಡೆತ್ ವಾರೆಂಟ್ ಈಗಾಗಲೇ ಜಾರಿಯಾಗಿದೆ.
ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31) ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿ ವಿಳಂಬವಾಗಲಿದೆ ಎಂದು ದೆಹಲಿ ಹೈಕೋರ್ಟ್‌ಗೆ ದೆಹಲಿ ಸರ್ಕಾರ ಮಾಹಿತಿ ನೀಡಿದೆ. ಅಪರಾಧಿಗಳ ಕ್ಷಮಾದಾನ ಅರ್ಜಿ ಇನ್ನೂ ಬಾಕಿ ಇದೆ ಎಂದು ಸರ್ಕಾರ ಹೇಳಿದೆ.
ಜೈಲಿನ ನಿಯಮಗಳ ಪ್ರಕಾರ ಅಪರಾಧಿಗಳ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವ ತನಕ ಕಾಯಬೇಕು. ಗಲ್ಲಿಗೇರಿಸುವ 14 ದಿನಗಳ ಮೊದಲು ಅವರಿಗೆ ನೋಟಿಸ್ ನೀಡಬೇಕು. ಆದ್ದರಿಂದ, ಈಗಿರುವ ಡೆತ್ ವಾರೆಂಟ್ ಪ್ರಕಾರ ಜನವರಿ 22ರಂದು ಗೆಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮುಕೇಶ್ ಸಿಂಗ್
ಸುಪ್ರೀಂಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿ ವಜಾ ಆಗುತ್ತಿದ್ದಂತೆ ಮಂಗಳವಾರ ಅಪರಾಧಿ ಮುಕೇಶ್ ಸಿಂಗ್ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದಾನೆ. ನ್ಯಾಯಾಲಯ ಜಾರಿಗೊಳಿಸಿರುವ ಡೆತ್ ವಾರೆಂಟ್ ರದ್ದುಪಡಿಸುವಂತೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕ್ಷಮಾದಾನ ಅರ್ಜಿ ಸಲ್ಲಿಸಿಲ್ಲ
ನಾಲ್ವರು ಅಪರಾಧಿಗಳಲ್ಲಿ ಮುಕೇಶ್ ಸಿಂಗ್ ಮಾತ್ರ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ. ಉಳಿದ ಅಪರಾಧಿಗಳಾದ ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ, ಅಕ್ಷಯ್ ಕುಮಾರ್ ಸಿಂಗ್ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿಲ್ಲ. ಈ ಅರ್ಜಿ ಸಲ್ಲಿಕೆಯಾಗಿ ಇತ್ಯರ್ಥವಾಗುವ ತನಕ ಗಲ್ಲಿಗೇರಿಸುವಂತಿಲ್ಲ.

ಹೊಸ ಡೆತ್ ವಾರೆಂಟ್ ಜಾರಿಗೊಳಿಸಿ
ದೆಹಲಿ ಸರ್ಕಾರ ಹೊಸ ಡೆತ್ ವಾರೆಂಟ್ ಜಾರಿಗೊಳಿಸಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದೆ. ಈಗಾಗಲೇ ಜಾರಿಗೊಳಿಸಿರುವ ಡೆತ್ ವಾರೆಂಟ್ ಪ್ರಕಾರ ಜನವರಿ 22ರ ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಜೈಲಿನಲ್ಲಿ ಸಿದ್ಧತೆ ನಡೆಯುತ್ತಿದೆ
ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಪವನ್ ಜಲ್ಲಾದ್ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಿದ್ದು, ಜನವರಿ 20ರಂದು ಅವರು ತಿಹಾರ್ ಜೈಲಿಗೆ ತಲುಪಲಿದ್ದಾರೆ. ಈಗ ಗಲ್ಲು ಶಿಕ್ಷೆ ಜಾರಿ ದಿನಾಂಕ ಮುಂದೂಡುವ ಸಾಧ್ಯತೆ ಇದೆ.












Click it and Unblock the Notifications