ನಿರ್ಭಯ ಅತ್ಯಾಚಾರಿಗಳ ಗಲ್ಲು ಶಿಕ್ಷೆಗೆ ಮತ್ತೊಂದು ವಿಘ್ನ?
ನವದೆಹಲಿ, ಮಾರ್ಚ್ 17 : ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ಮತ್ತೊಂದು ವಿಘ್ನ ಎದುರಾಗಿದೆ. ಮಾರ್ಚ್ 20ರಂದು 5.30ಕ್ಕೆ ಗಲ್ಲಿಗೇರಿಸಲು ಡೆತ್ ವಾರೆಂಟ್ ಜಾರಿಯಾಗಿದೆ.
ಪ್ರಕರಣದ ಅಪರಾಧಿಯಾಗಿರುವ ಅಕ್ಷಯ್ ಕುಮಾರ್ ಸಿಂಗ್ ಪತ್ನಿ ಬಿಹಾರ ಸ್ಥಳೀಯ ನ್ಯಾಯಾಲಯದಲ್ಲಿ ವಿಚ್ಛೇಧನ ಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಅರ್ಜಿಯನ್ನು ಸ್ವೀಕಾರ ಮಾಡಿದ್ದು, ಮಾರ್ಚ್ 19ಕ್ಕೆ ವಿಚಾರಣೆ ಮುಂದೂಡಿದೆ.
"ನನ್ನ ಗಂಡ ಮುಗ್ಧ ಅವರನ್ನು ಗಲ್ಲಿಗೇರಿಸುವ ಮುನ್ನ ಕಾನೂನು ಪ್ರಕಾರ ನನಗೆ ವಿಚ್ಛೇಧನ ನೀಡಬೇಕು" ಎಂದು ಮನವಿ ಮಾಡಿದ್ದಾರೆ. ಮಾರ್ಚ್ 19ರಂದು ಅರ್ಜಿ ವಿಚಾರಣೆ ನಡೆಯಲಿದ್ದು, ಮಾರ್ಚ್ 20ಕ್ಕೆ ಗಲ್ಲಿಗೇರಿಸಲು ಡೆತ್ ವಾರೆಂಟ್ ಹೊರಡಿಸಲಾಗಿದೆ.

ಅಕ್ಷಯ್ ಕುಮಾರ್ ಸಿಂಗ್ ಪತ್ನಿ ಪರ ವಕೀಲ ಮುಕೇಶ್ ಕುಮಾರ್, "ನನ್ನ ಕಕ್ಷಿದಾರರಿಗೆ ಕಾನೂನು ಪ್ರಕಾರ ವಿಚ್ಛೇಧನ ಪಡೆಯಲು ಅವಕಾಶವಿದೆ. ಅತ್ಯಾಚಾರ ಪ್ರಕರಣದಲ್ಲಿ ಪತಿ ಅಪರಾಧಿಯಾದರೆ ವಿಚ್ಛೇಧನ ಪಡೆಯಬಹುದಾಗಿದೆ" ಎಂದು ಹೇಳಿದ್ದಾರೆ.
"ಸುಪ್ರೀಂಕೋರ್ಟ್ ಆದೇಶದಂತೆ ಆತನನ್ನು ನೇಣಿಗೇರಿಸಲಾಗುತ್ತದೆ. ಆದಾದ ಮೇಲೆ ನಾನು ವಿಧವೆಯಾಗುತ್ತೇನೆ. ಅತ್ಯಾಚಾರ ಪ್ರಕರಣ ಅಪರಾಧಿಯೆನಿಸಿಕೊಂಡು ಸಾಯುವ ಅಥವ ವಿಧಾವ ಪತ್ನಿಯಾಗಿ ನಾನು ಬಾಳಲಾರೆ" ಎಂದು ಅರ್ಜಿಯಲ್ಲಿ ಅಕ್ಷಯ್ ಕುಮಾರ್ ಸಿಂಗ್ ಪತ್ನಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ನಿರ್ಭಯ ಅತ್ಯಾಚಾರ ಪ್ರಕರಣದ ಅಪರಾಧಿಗಳಾದ ಅಕ್ಷಯ್ (31), ಪವನ್ ಗುಪ್ತ (25), ವಿನಯ್ ಶರ್ಮಾ (26) ಮತ್ತು ಮುಕೇಶ್ ಸಿಂಗ್ (32) ಗಲ್ಲಿಗೇರಿಸಲು 4ನೇ ಡೆತ್ ವಾರೆಂಟ್ ಜಾರಿಗೊಳಿಸಲಾಗಿದೆ. ಆದರೆ, ವಿಚ್ಛೇಧನದ ಅರ್ಜಿ ವಿಚಾರಣೆ ಹಿನ್ನಲೆಯಲ್ಲಿ ಗಲ್ಲು ವಿಳಂಬವಾಗಲಿದೆಯೇ? ಎಂದು ಕಾದು ನೋಡಬೇಕು.
ಮಾರ್ಚ್ 20ರಂದು ಗಲ್ಲಿಗೇರಿಸಲು ನೀಡಿರುವ ಡೆತ್ ವಾರೆಂಟ್‌ಗೆ ತಡೆ ನೀಡಬೇಕು ಎಂದು ವಿನಯ್ ಶರ್ಮಾ, ಅಕ್ಷಯ್ ಕುಮಾರ್ ಹಾಗೂ ಪವನ್ ಗುಪ್ತಾ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.












Click it and Unblock the Notifications