ಐಟಿ ಉರುಳಿನಿಂದ ಸೋನಿಯಾ, ರಾಹುಲ್ ಗಾಂಧಿಗೆ ತಾತ್ಕಾಲಿಕ ನೆಮ್ಮದಿ
ನವದೆಹಲಿ, ಡಿಸೆಂಬರ್ 4: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿವಾದಕ್ಕೆ ಸಂಬಂಧಿಸಿದಂತೆ ತೆರಿಗೆ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರಗತಿಯ ಕ್ರಮಕ್ಕೆ ಮುಂದಾಗದಂತೆ ಸುಪ್ರೀಂಕೋರ್ಟ್ ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ.
ಐಟಿ ಇಲಾಖೆ ವಿರುದ್ಧ ತಡೆ ನೀಡಿ ಆದೇಶ ಹೊರಡಿಸಿದ ನ್ಯಾಯಮೂರ್ತಿ ಎಕೆ ಸಿಕ್ರಿ ನೇತೃತ್ವದ ನ್ಯಾಯಪೀಠ, ವಿವಾದದ ಮುಂದಿನ ವಿಚಾರಣೆಯನ್ನು ಜನವರಿ 8ಕ್ಕೆ ನಿಗದಿಪಡಿಸಿತು.
2011-12ರ ಆರ್ಥಿಕ ವರ್ಷದಲ್ಲಿ ಗಾಂಧಿ ಕುಟುಂಬದ ಆದಾಯದ ಅಂದಾಜು ಮಾಡುವ ಕಾರ್ಯದಲ್ಲಿ ಇಲಾಖೆ ಮುಂದುವರಿಯಬಹುದು. ಅಂತಿಮ ಆದೇಶವನ್ನೂ ನೀಡಬಹುದು. ಆದರೆ, ಅದನ್ನು ಜಾರಿ ಮಾಡುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಸೋನಿಯಾ ಮತ್ತು ರಾಹುಲ್ ಅವರ ಆಸ್ತಿ ಮೊತ್ತವನ್ನು ಮರು ಮೌಲ್ಯಮಾಪನ ಮಾಡುವ ಪ್ರಕ್ರಿಯೆಗೆ ಎಲ್ಲ ನ್ಯಾಯಾಲಯಗಳೂ ಅನುಮತಿ ನೀಡಿದ್ದವು. ಆದರೆ, ಅಂತಿಮ ಆದೇಶ ಹೊರಡಿಸಲು ಅವಕಾಶ ನೀಡಿರಲಿಲ್ಲ.
ನ್ಯಾಯಾಲಯದ ಆದೇಶಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣವು ವಿಚಾರಣೆಗೂ ಒಪ್ಪಿಕೊಳ್ಳಲು ಅರ್ಹವಾಗಿರಲಿಲ್ಲ. ಮಧ್ಯಂತರ ಆದೇಶವು ಐಟಿ ಇಲಾಖೆಗೆ ಹಿನ್ನಡೆಯುಂಟು ಮಾಡಲಿದೆ ಎಂದು ವಾದಿಸಿದರು.
ಆದರೆ, ಅದನ್ನು ಒಪ್ಪದ ನ್ಯಾಯಪೀಠ, ಎರಡೂ ಕಡೆಗಳಿಗೆ ಸಮಾನವಾಗಿರುವ ಆದೇಶವನ್ನು ನೀಡಲಾಗಿದೆ. ಪ್ರಕರಣದ ಸುದೀರ್ಘ ವಿಚಾರಣೆಯನ್ನು ಇಂದು ನಡೆಸಲು ಸಾಧ್ಯವಾಗದ ಸಲುವಾಗಿ ಮಧ್ಯಂತರ ಆದೇಶ ನೀಡುವುದು ಸೂಕ್ತ ಎಂದು ಹೇಳಿತು.












Click it and Unblock the Notifications