ಪಕ್ಷಗಳಿಗೆ ಹರಿದು ಬಂದ ಕೋಟಿ-ಕೋಟಿ ಹಣ ಬೇನಾಮಿ!
ನವದೆಹಲಿ, ಸೆ.14 : ಇದು ಓದಲು ಅಚ್ಚರಿ ಎನಿಸಿದರೂ ಸತ್ಯ. ಕಳೆದ ಎಂಟು ವರ್ಷಗಳಲ್ಲಿ ದೇಶದ ಆರು ರಾಜಕೀಯ ಪಕ್ಷಗಳಿಗೆ ಬೇನಾಮಿಯಾಗಿ ಹರಿದು ಬಂದಿರುವ ಹಣ ಬರೋಬ್ಬರಿ 3674 ಕೋಟಿ. ಈ ಹಣ ಪಕ್ಷಗಳಿಗೆ ಎಲ್ಲಿಂದ ಹರಿದು ಬಂತು ಎಂಬುವುದರ ಬಗ್ಗೆ ಮಾಹಿತಿಯೇ ಇಲ್ಲ.
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಈ ಅಂಕಿ ಅಂಶಗಳನ್ನು ನವದೆಹಲಿಯಲ್ಲಿ ಶನಿವಾರ ಬಿಡುಗಡೆ ಮಾಡಿದೆ. 8 ವರ್ಷದಲ್ಲಿ 6 ರಾಜಕೀಯ ಪಕ್ಷಗಳಿಗೆ ಕೊಡುಗೆ ರೂಪದಲ್ಲಿ ಬಂದಿರುವ ಹಣ 4895 ಕೋಟಿ. ಇದರಲ್ಲಿ 3674 ಕೋಟಿಯಷ್ಟು ಹಣ ಬೇನಾಮಿ ಹೆಸರಿನಲ್ಲಿ ಪಕ್ಷಗಳ ಖಜಾನೆ ಸೇರಿದೆ.
ಪಕ್ಷಗಳಿಗೆ ಹರಿದು ಬಂದ ಹಣದಲ್ಲಿ ಕೇವಲ ಶೇ.8.9 ರಷ್ಟು ಹಣದ ಮೂಲ ಪತ್ತೆಯಾಗಿದೆ. ಶೇ.2.1 ರಷ್ಟು ಹಣ ಚುನಾವಣಾ ಟ್ರಸ್ಟ್‌ಗಳಿಂದ ಬಂದಿದೆ. ಉಳಿದ ಹಣ ಖಾಸಗಿ ಕಂಪನಿಗಳು ಕಟ್ಟಿಕೊಂಡಿರುವ ಟ್ರಸ್ಟ್‌ಗಳಿಂದ ಪಕ್ಷಗಳಿಗೆ ಹೋಗಿದೆ. ಆದರೆ ಉಳಿದ ಶೇ.75 ರಷ್ಟು ಹಣಕ್ಕೆ ಮಾತ್ರ ಮೂಲವೇ ಪತ್ತೆಯಾಗಿಲ್ಲ.
ಚುನಾವಣಾ ಆಯೋಗದ ಪ್ರಕಾರ 20 ಸಾವಿರಕ್ಕಿಂತ ಹೆಚ್ಚು ಕೊಡುಗೆ ನೀಡುವ ದಾನಿಗಳ ಬಗ್ಗೆ ಪಕ್ಷಗಳು ವಿವರ ನೀಡಬೇಕು. ಇದಕ್ಕಿಂತ ಕಡಿಮೆ ಹಣ ನೀಡುವ ದಾನಿಗಳ ಬಗ್ಗೆ ಮಾಹಿತಿ ನೀಡಬೇಕಿಲ್ಲ. ಈ ನಿಯಮವನ್ನು 6 ಪಕ್ಷಗಳು ಪಾಲಿಸಿಲ್ಲ. ಯಾವ ಪಕ್ಷಕ್ಕೆ ಎಷ್ಟು ಹಣ?

ಕಾಂಗ್ರೆಸ್ ಪಕ್ಷಕ್ಕೆಷ್ಟು?
ಎಂಟು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಟ್ಟಾರೆ 2365 ಕೋಟಿ ಹಣ ಹರಿದು ಬಂದಿದೆ. ಅದರಲ್ಲಿ 1,951ಕೋಟಿ ಹಣ ಬೇನಾಯಿ ಹೆಸರಿನಿಂದ ಹರಿದು ಬಂದಿದೆ.

ಬಿಜೆಪಿಗೂ ಬಂದಿದೆ ಹಣ
ಎಂಟು ವರ್ಷಗಳಲ್ಲಿ ಕೇಂದ್ರದ ಪ್ರತಿಪಕ್ಷ ಬಿಜೆಪಿಗೂ ಒಟ್ಟಾರೆ 1304 ಕೋಟಿ ಹಣ ಹರಿದು ಬಂದಿದೆ. ಇದರಲ್ಲಿ 952 ಕೋಟಿ ಹಣ ಬೇನಾಯಿ ಹೆಸರಿನಲ್ಲಿ ಬಂದಿದೆ ಎಂದು ಎಡಿಆರ್ ದೂರಿದೆ.

ಬಿಎಸ್‌ಪಿಗೂ ಬಂದಿದೆ ಹಣ
ಬಿಎಸ್ ಪಿ ಪಕ್ಷಕ್ಕೂ ಸಹ ಬೇನಾಯಿ ಹೆಸರಿನಲ್ಲಿ ಒಟ್ಟು 308 ಕೋಟಿ ಹಣ ಹರಿದು ಬಂದಿದೆ. ಎಂಟು ವರ್ಷದ ಅವಧಿಯಲ್ಲಿ ಬಿಎಸ್ ಪಿ ಪಕ್ಷಕ್ಕೆ 497 ಕೋಟಿ ಹಣ ಬಂದಿದ್ದು, ಅದರಲ್ಲಿ 308 ಕೋಟಿಗೆ ದಾಖಲೆ ಇಲ್ಲವೆಂದು ಎಡಿಆರ್ ಬಹಿರಂಗ ಪಡಿಸಿದೆ.

ಸಿಪಿಎಂ ಒಡಲು ಸೇರಿದೆ ಹಣ
ಜನಪರ ಕಾಳಜಿ ಹೊಂದಿರುವ ಸಿಪಿಎಂ ಪಕ್ಷಕ್ಕೂ ಒಟ್ಟಾರೆ 521 ಕೋಟಿ ಹಣ ಹರಿದು ಬಂದಿದೆ. ಇದರಲ್ಲಿ ಬೇನಾಮಿ ಹೆಸರಿನಲ್ಲಿ 281 ಕೋಟಿ ರೂ. ಬಂದಿದೆ.

ಎನ್‌ಸಿಪಿಗೂ ಹಣದ ಉಡುಗೊರೆ
ಎಂಟು ವರ್ಷಗಳ ಅವಧಿಯಲ್ಲಿ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಗೆ ಒಟ್ಟಾರೆ 198 ಕೋಟಿ ಹಣ ಬಂದಿದೆ. ಇದರಲ್ಲಿ 182 ಕೋಟಿ ಹಣ ಬೇನಾಯಿ ಹೆಸರಿನಲ್ಲಿ ಬಂದಿದ್ದು, ಯಾವುದೇ ದಾಖಲೆಗಳು ಇಲ್ಲವಾಗಿದೆ.

ಆರ್ ಟಿಐ ಅಗತ್ಯ
ಪಕ್ಷಗಳ ಹಣದ ಮೂಲಗಳನ್ನು ತಿಳಿದುಕೊಳ್ಳಲು ರಾಜಕೀಯ ಪಕ್ಷಗಳು ಆರ್ ಟಿಐ ವ್ಯಾಪ್ತಿಗೆ ಬರಬೇಕು ಎಂದು ಪ್ರಸ್ತಾಪಿಸಲಾಗಿತ್ತು. ಆದರೆ, ಪಕ್ಷಗಳು ಜಾಣ ನಡೆ ಅನುಸರಿಸಿ, ಆರ್ ಟಿಐ ವ್ಯಾಪ್ತಿಗೆ ಬರದಂತೆ ನಿಯಮ ರೂಪಿಸಿಕೊಂಡಿವೆ ಎಂದು ಎಡಿಆರ್ ಆರೋಪಿಸಿದೆ.












Click it and Unblock the Notifications