ಸರ್ಕಾರಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಪಾಠ ಬೇಕು: ರಾಹುಲ್ ಟ್ವೀಟ್
ನವದೆಹಲಿ ಡಿಸೆಂಬರ್ 14: 12 ರಾಜ್ಯಸಭಾ ಸಂಸದರ ಅಮಾನತಿನ ವಿರುದ್ಧದ ಪ್ರತಿಭಟನೆಯನ್ನು ಮುಂದುವರೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಡಿಸೆಂಬರ್ 14) ಇಂದು ಬಿಜೆಪಿ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಬಗ್ಗೆ "ಪಾಠ ಬೇಕು" ಎಂದು ಟ್ವೀಟ್ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಚರ್ಚೆ ಮತ್ತು ಭಿನ್ನಾಭಿಪ್ರಾಯದ ಮಹತ್ವದ ಕುರಿತು ಮೋದಿ ಸರ್ಕಾರಕ್ಕೆ ಟ್ಯೂಷನ್ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಟ್ವೀಟರ್‌ನಲ್ಲಿ ಟೀಕಿಸಿದ್ದಾರೆ.
लोकतंत्र में बहस व असहमति का महत्व-
— Rahul Gandhi (@RahulGandhi) December 14, 2021
इस विषय में मोदी सरकार को ट्यूशन की ज़रूरत है।#Debate #Dissent #Democracy
ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ನವೆಂಬರ್ 29 ರಂದು ಹನ್ನೆರಡು ಪ್ರತಿಪಕ್ಷದ ರಾಜ್ಯಸಭಾ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಭಾಗಗಳಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಯಿತು. ಅಮಾನತು ವಿರೋಧಿಸಿ ಇಂದು ಮಧ್ಯಾಹ್ನ 12:30 ಕ್ಕೆ ರಾಜ್ಯಸಭೆ ಮತ್ತು ಲೋಕಸಭೆಯ ಸಂಸದರು ಸಂಸತ್ತಿನ ಗಾಂಧಿ ಪ್ರತಿಮೆಯಿಂದ ವಿಜಯ್ ಚೌಕ್‌ನತ್ತ ಮೆರವಣಿಗೆ ನಡೆಸಲಿದ್ದಾರೆ. ರಾಹುಲ್ ಗಾಂಧಿ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಲಿದ್ದಾರೆ. ಮೆರವಣಿಗೆ ನಂತರ ಪತ್ರಿಕಾಗೋಷ್ಠಿ ನಡೆಯಲಿದೆ.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿದ ಕಾರಣಕ್ಕಾಗಿ ಪ್ರತಿಪಕ್ಷದ ಹನ್ನೆರಡು ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿತ್ತು. ಅಧಿಕೃತ ಸೂಚನೆಯಲ್ಲಿ, "ಈ ಸದನವು ಪೀಠದ ಅಧಿಕಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ. ಸದನದ ನಿಯಮಗಳ ಸಂಪೂರ್ಣ ದುರುಪಯೋಗವನ್ನು ತೀವ್ರವಾಗಿ ಖಂಡಿಸುತ್ತದೆ, ಆ ಮೂಲಕ ತಮ್ಮ ದುರ್ನಡತೆ, ಅವಹೇಳನಕಾರಿ, ಅಶಿಸ್ತಿನ ಮತ್ತು ಹಿಂಸಾತ್ಮಕ ಕೃತ್ಯಗಳ ಮೂಲಕ ಸದನದಲ್ಲಿ ಚರ್ಚೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಲಾಗಿರುತ್ತದೆ. ರಾಜ್ಯಸಭೆಯ 254ನೇ ಅಧಿವೇಶನದ ಕೊನೆಯ ದಿನ ಅಂದರೆ ಆಗಸ್ಟ್ 11ರಂದು ಭದ್ರತಾ ಸಿಬ್ಬಂದಿಯ ಮೇಲೆ ಉದ್ದೇಶಪೂರ್ವಕ ದಾಳಿ," ಬಗ್ಗೆ ಉಲ್ಲೇಖಿಸಲಾಗಿದೆ.

ರಾಜ್ಯಸಭೆ ವಿರೋಧ ಪಕ್ಷದ 12 ಸಂಸದರ ಅಮಾನತು ಆದೇಶವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ''ಸದನದಲ್ಲಿ ದೌರ್ಜನ್ಯ ಎಸಗಿದ ಸದಸ್ಯರ ಮೇಲೆ ಕನಿಕರ ತೋರಲ್ಲ. ಹೀಗಾಗಿ ಸದಸ್ಯರ ಅಮಾನತು ಆದೇಶವನ್ನು ಹಿಂಪಡೆಯಲು ಪ್ರತಿಪಕ್ಷಗಳು ಮಾಡಿರುವ ಮನವಿಯು ಪರಿಗಣಿಸಲು ಯೋಗ್ಯವಾಗಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ನಾಯ್ಡು ಹೇಳಿದರು. "ರಾಜ್ಯಸಭೆಯಲ್ಲಿ ಸೋಮವಾರ ವಿರೋಧ ಪಕ್ಷದ 12 ಸಂಸದರನ್ನು ಅಮಾನತುಗೊಳಿಸುವ ಸಂದರ್ಭದಲ್ಲಿ ಎಲ್ಲಾ ನಿಯಮಗಳ ಪ್ರಕಾರ ಕಾರ್ಯವಿಧಾನಗಳನ್ನು ಮಾಡಲಾಗಿದೆ," ಎಂದು ಸಭಾಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ರಾಜ್ಯಸಭೆಯಿಂದ ಅಮಾನತುಗೊಂಡ ವಿರೋಧ ಪಕ್ಷದ 12 ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮೇಲ್ಮನೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಸಂಸತ್ತಿನ ಮುಂಗಾರು ಅಧಿವೇಶನವು "ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿನ ಅಧಿವೇಶನ" ಎಂದಿದ್ದರು.
ಅಮಾನತುಗೊಂಡಿರುವ ಸಂಸದರು ಕ್ಷಮೆ ಕೇಳಿದಲ್ಲಿ ಅಮಾನತು ಆದೇಶ ಹಿಂಪಡೆಯಲಾಗುವುದು ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇನ್ನೂ 'ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಸದನದ ನಿಯಮಗಳಿಗೆ ವಿರುದ್ಧವಾಗಿ ಸಂಸದರನ್ನು ಅಮಾನತುಗೊಳಿಸಿದ್ದಾರೆ. ಸರ್ಕಾರದ ಕ್ರಮವು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸುವ ಹಾಗೂ ಕತ್ತು ಹಿಸುಕುವ ಪ್ರಯತ್ನವಾಗಿದೆ' ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಆದರೆ ನಾವು ಸಂಸದರನ್ನು ಏಕೆ ಅಮಾನತು ಮಾಡಲಾಯಿತು ಎಂಬುದನ್ನು ವಿವರಿಸಿದ್ದೇವೆ. ಏನಾಯಿತು ಎಂಬುದನ್ನು ದೇಶವೇ ನೋಡಿದೆ. ದಾಖಲೆಗಳಲ್ಲಿದೆ. ಅವರು ಇಂದಿಗೂ ಕ್ಷಮೆ ಕೇಳಿದರೆ ನಾವು ಅಮಾನತು ಆದೇಶವನ್ನು ಹಿಂಪಡೆಯುವುದಕ್ಕೆ ಸಿದ್ಧರಿದ್ದೇವೆ ಎಂದು ಜೋಶಿ ತಿಳಿಸಿದ್ದಾರೆ.












Click it and Unblock the Notifications