ನರೇಂದ್ರ ಮೋದಿ ಜನಪ್ರಿಯತೆ ನೀರಿನ ಮೇಲಿನ ಗುಳ್ಳೆ ಇದ್ದಂತೆ, ಅಷ್ಟೇ..
ನವದೆಹಲಿ, ಅ 16: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೇಲೆ ಹರಿಹಾಯ್ದಿದ್ದಾರೆ. ನರೇಂದ್ರ ಮೋದಿ ಜನಪ್ರಿಯತೆ ಅನ್ನುವುದು ನೀರಿನ ಮೇಲಿನ ಗುಳ್ಳೆ ಇದ್ದಂತೆ.
ಸಾಮಾಜಿಕ ತಾಣಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಅನಗತ್ಯ ಜನಪ್ರಿಯತೆಯನ್ನು ಮೋದಿ ತಾನಾಗಿಯೇ ಸೃಷ್ಟಿಸುತ್ತಿದ್ದಾರೆ. ಗುಜರಾತ್ ರಾಜ್ಯದಲ್ಲಿನ ಪೊಳ್ಳು ಅಭಿವೃದ್ದಿಯನ್ನು ಮುಂದಿಟ್ಟುಕೊಂಡು ಮೋದಿ ತನಗೆ ತಾನೇ 'ಹೈಪ್' ಸೃಷ್ಟಿಸಿ ಕೊಳ್ಳುತ್ತಿದ್ದಾರೆಂದು ಕಪಿಲ್ ಸಿಬಲ್ ಟೀಕಿಸಿದ್ದಾರೆ.
ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಕಪಿಲ್ ಸಿಬಲ್, ಜನಪ್ರಿಯತೆಯ ಉತ್ತುಂಗಕ್ಕೇರಿದವನು ಒಂದಲ್ಲಾ ಒಂದು ದಿನ ಇಳಿಯಲೇ ಬೇಕು. ಇದು ನೈಸರ್ಗಿಕ ಮತ್ತು ವಿಧಿ ನಿಯಮ. ಇದು ಮೋದಿಗೂ ಅನ್ವಯಿಸುತ್ತದೆ.
ಗುಜರಾತ್ ಹಲವು ಕ್ಷೇತ್ರಗಳಲ್ಲಿ ಇನ್ನೂ ಹಿಂದುಳಿದಿದೆ. ಮುಂದುವರಿದ ಕ್ಷೇತ್ರದಲ್ಲಿನ ಭಾಗವನ್ನು ಮಾತ್ರ ನರೇಂದ್ರ ಮೋದಿ ದೇಶದ ಮುಂದಿಟ್ಟು ಜನರಿಗೆ ವಸ್ತುಸ್ಥಿತಿಯುನ್ನು ಮುಚ್ಚಿಡುತ್ತಿದ್ದಾರೆಂದು ಸಿಬಲ್ ಆರೋಪಿಸಿದ್ದಾರೆ.
ರಾಯ್ಟರ್ಸ್ ಸಂದರ್ಶನದ ಆಯ್ದ ಭಾಗ ಸ್ಲೈಡಿನಲ್ಲಿ..

ಕಪಿಲ್ ಸಿಬಲ್
ಪ್ರ: ನರೇಂದ್ರ ಮೋದಿ ಜನಪ್ರಿಯತೆಯ ಉತ್ತುಂಗಕ್ಕೇರಲು ಕಾರಣ ಏನಿರಬಹುದು?
ಸಿಬಲ್: ಜನಪ್ರಿಯತೆ ಮತ್ತು ಉತ್ತುಂಗ ಈ ಎರಡು ಪದಗಳ ಅರ್ಥ ನನಗೆ ತಿಳಿದಿಲ್ಲ. ಒಂದಂತೂ ಸತ್ಯ, ಅತಿ ಕಡಿಮೆ ಅವಧಿಯಲ್ಲಿ ಮೇಲೆ ಬಂದವರು ಕೆಳಗೆ ಇಳಿಯಲೇ ಬೇಕು. ಮೋದಿ ವಿಚಾರದಲ್ಲೂ ಹೀಗೂ ಆಗಬಹುದು. ಸಾಮಾಜಿಕ ತಾಣಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಮೋದಿ ಜನಪ್ರಿಯತೆ ಹೆಚ್ಚಿಸಲು ಖಾಸಗಿ ಕಂಪೆನಿಗಳು ಕೆಲಸ ನಿರ್ವಹಿಸುತ್ತಿರುವ ವಿಚಾರ ಗುಟ್ಟಾಗಿ ಏನೂ ಉಳಿದಿಲ್ಲ.

ಸಂದರ್ಶನ
ಪ್ರ: ಚುನಾವಣೆಗೆ ಮುನ್ನವೇ ಮೋದಿ ಎನ್ನುವ ಗುಳ್ಳೆ ಸ್ಫೋಟಗೊಳ್ಳುತ್ತದಾ?
ಸಿಬಲ್: ಹೌದು. ಗುಳ್ಳೆ ಹೆಚ್ಚು ಹೊತ್ತು ಇರುವುದಿಲ್ಲ. ನರೇಂದ್ರ ಮೋದಿ ನೀರಿನ ಮೇಲಿನ ಗುಳ್ಳೆ ಇದ್ದಂತೆ. ಮೋದಿ ಬಗ್ಗೆ ನಮಗೆ ಯಾವುದೇ ಭಯವಿಲ್ಲ. ಈವರೆಗೆ ನಮ್ಮೆದುರಿಗೆ ಬಂದ ಇನ್ನೊಬ್ಬ ಪ್ರತಿಸ್ಪರ್ಥಿ ಎಂದಷ್ಟೇ ನಾವು ಭಾವಿಸಿದ್ದೇವೆ.

ರಾಯ್ಟರ್ಸ್
ಪ್ರ: ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತದೆ. ಬಿಜೆಪಿಗೆ ಸ್ವಲ್ಪ ಮಟ್ಟಿನ ಮುನ್ನಡೆ ಸಿಗಲಿದೆ ಎಂದಿದೆ, ಈ ಬಗ್ಗೆ?
ಸಿಬಲ್: 2004ರ ಚುನಾವಣಾ ಪೂರ್ವ ಸಮೀಕ್ಷೆಯನ್ನು ಒಮ್ಮೆ ಅವಲೋಕಿಸಿ. ಸಮೀಕ್ಷೆಯಲ್ಲಿ ಬಿಜೆಪಿಗೆ 310 ಸ್ಥಾನ ಸಿಗಲಿದೆಂದು ಸಮೀಕ್ಷಿಸಲಾಗಿತ್ತು. ಆದರೆ ಬಂದದೆಷ್ಟು ಎಂದು ನಿಮಗೆ ತಿಳಿದಿದೆ. 2009ರ ಚುನಾವಣೆಯಲ್ಲೂ ಬಿಜೆಪಿ, ಕಾಂಗ್ರೆಸ್ಸಿಗಿಂತ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದಿತ್ತು. ಏನಾಯಿತು?

ರಾಹುಲ್ ಗಾಂಧಿ
ಪ್ರ: ರಾಹುಲ್ ಗಾಂಧಿ ಮುಂದಿನ ಪ್ರಧಾನಿಯೇ?
ಸಿಬಲ್: ಅದನ್ನು ನಾನು ನಿರ್ಧರಿಸುವುದಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅದನ್ನು ನಿರ್ಧರಿಸುತ್ತದೆ.

ನಿಮ್ಮ ಮಹತ್ವಾಕಾಂಕ್ಷೆ
ಪ್ರ: ರಾಜಕೀಯ ಜೀವನದಲ್ಲಿನ ನಿಮ್ಮ ಮುಂದಿನ ಮಹತ್ವಾಕಾಂಕ್ಷೆ ಏನು? ಚುನಾವಣೆಯ ನಂತರ ಆಯಕಟ್ಟಿನ ಹುದ್ದೆ ನಿಭಾಯಿಸ ಬೇಕೆಂದಿದ್ದೀರಾ?
ಸಿಬಲ್: ನನಗೆ ಮಹತ್ವಾಕಾಂಕ್ಷೆ ಅನ್ನುವುದೇ ಇಲ್ಲ. ರಾಜಕೀಯಕ್ಕೆ ಬಂದಿದ್ದೇ ನಾನು ಆಕಸ್ಮಿಕವಾಗಿ. ರಾಜಕೀಯದಲ್ಲಿ ಈ ಮಟ್ಟಕ್ಕೆ ನಾನು ಬೆಳೆಯಲು ಕಾರಣವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷದ ಮೂಲಕ ಜನಸೇವೆ ಮಾಡಲು ಸಿಕ್ಕಿದ್ದು ನನ್ನ ಭಾಗ್ಯ.












Click it and Unblock the Notifications