ಎಕ್ಸಿಟ್ ಪೋಲ್ ಸಮ್ಮುಖದಲ್ಲಿ ಭರ್ಜರಿ ಬೆಟ್ಟಿಂಗ್ ದಂಧೆ
ಮುಂಬೈ, ಮೇ 14: 16ನೇ ಲೋಕಸಭೆ ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ. ಅದಕ್ಕೂ ಮುನ್ನ ಚುನಾವಣೆಯ ಫಲಿತಾಂಶ ಹೊರಬೀಳಬೇಕಿದೆ. ಈ ಮಧ್ಯೆ ಎಕ್ಸಿಟ್ ಪೋಲ್ ಕರಾಮತ್ತು ಜೋರಾಗಿದೆ. ಮತ್ತು ಬಾಜಿ ಲೋಕಕ್ಕೆ ಈ ಎಕ್ಸಿಟ್ ಪೋಲ್ ಫಲಿತಾಂಶಗಳು ಭಾರಿ ಆಸರೆಯಾಗಿವೆ. ಮೂಲಗಳ ಪ್ರಕಾರ ದೇಶದಲ್ಲಿ 60,000 ಕೋಟಿ ರೂ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ.
ಸಟ್ಟಾ ಬಜಾರಿನಲ್ಲಿ (betting market) ನಿಸ್ಸಂಶಯವಾಗಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಅಗ್ರ ಪ್ರಾಶಸ್ತ್ಯ ಲಭಿಸಿದೆ. ಬುಕ್ಕಿಗಳು ಮೋದಿಗೇ ಮಣೆ ಹಾಕಿದ್ದಾರೆ. ಮೋದಿಗೆ 62 ಪೈಸೆಯಿದ್ದರೆ ರಾಹುಲ್ ಗಾಂಧಿಗೆ ದುಬಾರಿ 85 ಪೈಸೆ ಫಿಕ್ಸ್ ಆಗಿದೆ. ಮುಲಾಯಂ ಸಿಂಗ್ ಯಾದವ್ ಅವರಿಗೆ 1 ರೂ 40 ಪೈಸೆ, ಅರವಿಂದ್ ಕೇಜ್ರಿವಾಲ್ ಅವರಿಗೆ ಇನ್ನೂ ಹೆಚ್ಚಿಗೆ 4 ರೂ 50 ಪೈಸೆ ಸಹ ನೀಡಲು ಬುಕ್ಕಿಗಳು ಸಿದ್ಧರಾಗಿದ್ದಾರೆ. ಆದರೆ ಯಾರೂ ಮುಂದೆ ಬರುತ್ತಿಲ್ಲ ಅಷ್ಟೇ.
2 ವಾರಗಳ ಹಿಂದೆ NDAಗೆ 300 ಸ್ಥಾನಗಳನ್ನು ದಯಪಾಲಿಸಿದ್ದ ಬುಕ್ಕಿಗಳು ಮತದಾನ ಮುಗಿದ ಬಳಿಕ ಈಗ ಸ್ವಲ್ಪ ಏರುಪೇರು ಮಾಡಿದ್ದಾರೆ. ಬುಕ್ಕಿಗಳು ಫಿಕ್ಸ್ ಮಾಡಿರುವ ಬಾಜಿ ರೇಟು ಹೀಗಿದೆ:

NDA ಗೆದ್ದರೆ
150 ಸ್ಥಾನಗಳಿಗೆ - 42 ಪೈಸೆ
200 ಸ್ಥಾನಗಳಿಗೆ - 78 ಪೈಸೆ
250 ಸ್ಥಾನಗಳಿಗೆ - 2.25 ಪೈಸೆ
300 ಸ್ಥಾನಗಳಿಗೆ - 4 ರೂಪಾಯಿ
UPA ಗೆದ್ದರೆ
150 ಸ್ಥಾನಗಳಿಗೆ - 60 ಪೈಸೆ
200 ಸ್ಥಾನಗಳಿಗೆ - 90 ಪೈಸೆ
250 ಸ್ಥಾನಗಳಿಗೆ - 3.25 ಪೈಸೆ
'NDA ಕೂಟದ ಹಿರಿಯ ನಾಯಕರು ಕೊನೆಯ ಹಂತದಲ್ಲಿ ಮಾಡಿದ ಚುನಾವಣಾ ಭಾಷಣಗಳು ಇರುಸುಮುರುಸು ತಂದಿದ್ದರೆ ಭಾರಿ ಪ್ರಮಾಣದಲ್ಲಿ ಮತದಾನ ನಡೆದಿರುವುದೂ ಸಟ್ಟಾ ಬಜಾರಿನ ಲೆಕ್ಕಾಚಾರದಲ್ಲಿ ಸ್ವಲ್ಪಮಟ್ಟಿನ ನಕಾರಾತ್ಮಕ ಪ್ರಭಾವ ಬೀರಿದೆ ಎಂದು ಬುಕ್ಕಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ವಾರಣಾಸಿಯಲ್ಲಿ ಪಂಟರುಗಳು ತುಂಬಾ ಸಕ್ರಿಯರಾಗಿದ್ದಾರೆ. ಮೋದಿ ಮತ್ತು ಅಜಯ್ ರಾಯ್ ಇಬ್ಬರಿಗೂ ಸಮಾನ ಮಣೆ (45 ಪೈಸೆ) ಹಾಕಲಾಗಿದೆ. ಅದೇ ಅರವಿಂದ್ ಕೇಜ್ರಿವಾಲ್ ಅವರಿಗೆ 1 ರೂಪಾಯಿ 20 ಪೈಸೆಯಷ್ಟು ನೀಡಲು ಸಿದ್ಧರಾಗಿದ್ದಾರೆ.












Click it and Unblock the Notifications