ಚಿತ್ರಗಳು : ನವದೆಹಲಿಯಲ್ಲಿ ಮಳೆ, ಚಿಣ್ಣರ ನೀರಾಟ
ನವದೆಹಲಿ, ಜುಲೈ 13 : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಮಧ್ಯಾಹ್ನದ ನಂತರ ಸುರಿದ ಮಳೆಯಿಂದಾಗಿ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಯಿತು, ತಗ್ಗು ಪ್ರದೇಶಗಳು ಜಲಾವೃತವಾದವು.
ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ದೆಹಲಿಯಲ್ಲಿ ದಟ್ಟ ಮೋಡ ಕವಿದಿತ್ತು. ಜೋರಾಗಿ ಗಾಳಿ ಬೀಸಿದ್ದು, ಬಳಿಕ ಮಿಂಚು, ಗುಡುಗಿನೊಂದಿಗೆ ಮಳೆ ಸುರಿಯಿತು. ನಗರದ ಜನರು ಮಳೆಯಿಂದಾಗಿ ಪರದಾಡಿದರು. ಕೆಲವು ಗಂಟೆಗಳ ಕಾಲ ಸುರಿದ ಮಳೆ ಜನ ಜೀವನವನ್ನು ಅಸ್ತವ್ಯಸ್ತ ಮಾಡಿತು.
ನಗರದಲ್ಲಿ ಇಂದು 27.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಮಧ್ಯಾಹ್ನದ ಮಳೆಯ ನಂತರ ತಾಪಮಾನ ಕಡಿಮೆ ಆಯಿತು. ನವದೆಹಲಿಯ ಬೇರೆ-ಬೇರೆ ಪ್ರದೇಶಗಳಲ್ಲಿ ಇನ್ನೆರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಿಲಕ್ ಬ್ರಿಡ್ಜ್, ಮೋದಿ ಫ್ಲೈ ಓವರ್, ವೆಲ್ ಕಮ್ ಮೆಟ್ರೋ ಸ್ಟೇಷನ್ ಮುಂತಾದ ಕಡೆಗಳಲ್ಲಿ ಮಳೆ ನೀರು ತುಂಬಿಕೊಂಡು ಸಂಚಾರಕ್ಕೆ ತೊಂದರೆ ಉಂಟಾಯಿತು. ದೆಹಲಿ ಸಂಚಾರಿ ಪೊಲೀಸರು ಸಂಚಾರ ದಟ್ಟಣೆ ಬಗ್ಗೆ ಕ್ಷಣ-ಕ್ಷಣದ ಮಾಹಿತಿಯನ್ನು ಟ್ವಿಟರ್ ಮೂಲಕ ನೀಡಿದರು. ಪಿಟಿಐ ಚಿತ್ರಗಳು..

ಹಲವು ಪ್ರದೇಶಗಳು ಜಲಾವೃತ
ಶುಕ್ರವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ ವೈ-ಪಾಯಿಂಟ್ ಓಲ್ಡ್ ರೈಲ್ವೆ ಬ್ರಿಡ್ಜ್, ಕಿಸಾನ್ ಗಂಝ್, ಆಜಾದ್ ಮಾರ್ಕೆಟ್, ಓಲ್ಡ್ ಐರನ್ ಬ್ರಿಡ್ಜ್ ಸೇರಿದಂತೆ ವಿವಿಧ ಪ್ರದೇಶಗಳು ಜಲಾವೃತಗೊಂಡವು. ಆದ್ದರಿಂದ, ವಾಹನ ಸವಾರರು ಪರದಾಡಿದರು.

ಟ್ವಿಟರ್ ಮೂಲಕ ಮಾಹಿತಿ
ಭಾರೀ ಮಳೆಯ ಕಾರಣ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ದೆಹಲಿ ಪೊಲೀಸರು ಸರಣಿ ಟ್ವಿಟ್‌ಗಳ ಮೂಲಕ ಜನರಿಗೆ ಮಾಹಿತಿ ನೀಡ ತೊಡಗಿದರು. ರಾಮಲೀಲಾ ಮೈದಾನ, ಸುಲ್ತಾನ್ ಪುರ್, ಐಪಿ ಫ್ಲೈ ಓವರ್, ಮಿಂಟೋ ಅಂಡರ್ ಬ್ರಿಡ್ಜ್ ಮುಂತಾದ ಕಡೆಗಳಲ್ಲಿ ರಸ್ತೆಗಳು ಜಲಾವೃತವಾದವು.

ಮಳೆಯ ಜೊತೆ ಗಾಳಿ
ಭಾರೀ ಮಳೆಯ ಜೊತೆ ಜೋರಾಗಿ ಗಾಳಿ ಬೀಸಿತು. ಆದ್ದರಿಂದ, ಅಶೋಕ್ ವಿಹಾರ ಸಿಗ್ನಲ್, ಐಎಲ್‌ಬಿಎಸ್ ಆಸ್ಪತ್ರೆ, ವಸಂತ್ ವಿಹಾರ್ ಮುಂತಾದ ಕಡೆ ಮರಗಳು ಧರೆಗೆ ಉರುಳಿದವು. ಭಾರೀ ಮಳೆ ಸುರಿದಿದ್ದರಿಂದ ಕ್ಯಾಬ್ ಕಂಪನಿಗಳು ದರವನ್ನು ಹೆಚ್ಚಳ ಮಾಡಿದವು.

ಇನ್ನೂ ಎರಡು ದಿನ ಮಳೆ
ದೆಹಲಿಯಲ್ಲಿ ಇಂದು 27.8 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಗುರುವಾರ 28.6 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ನಗರದ ವಿವಿಧ ಪ್ರದೇಶಗಳಲ್ಲಿ ಇನ್ನೂ 2 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.












Click it and Unblock the Notifications