ಕುಲಭೂಷಣ್ ವಿಷಯದಲ್ಲಿ ಕಾನೂನು ಪಾಲಿಸುತ್ತೇವೆ : ಇಮ್ರಾನ್ ಖಾನ್
ನವದೆಹಲಿ, ಜುಲೈ 18: ಬೇಹುಗಾರಿಕೆಯ ಆರೋಪದ ಮೇಲೆ ಪಾಕಿಸ್ತಾನದಿಂದ ಬಂಧಿತರಾಗಿ,ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಕುಲಭೂಷಣ್ ಯಾದವ್ ಅವರ ಮರಣದಂಡನೆಯನ್ನು ಅಮಾನತು ಪಡಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.
"ನಾವು ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಮರಣದಂಡನೆ ತೀರ್ಪನ್ನು ಮರುಪರಿಶೀಲಿಸುತ್ತೇವೆ. ಅಂತೆಯೇ ನ್ಯಾಯಾಲಯ ಕುಲಭೂಷಣ್ ಜಾಧವ್ ಅವರನ್ನು ನಿರ್ದೋಷಿ ಎಂದು ಘೋಷಿಸಿ, ಬಿಡುಗಡೆ ಮಾಡಿ, ಭಾರತಕ್ಕೆ ವಾಪಸ್ ಕಳಿಸುವಂತೆ ಎಲ್ಲಿಯೂ ಹೇಳಿಲ್ಲ. ನಾವು ಕಾನೂನಿನ ಪ್ರಕಾರವೇ ನಡೆದುಕೊಳ್ಳುತ್ತೇವೆ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಕುಲಭೂಷಣ್ ಜಾಧವ್ ಅವರು ಭಾರತ 'ರಾ' ಏಜೆಂಟ್ ಆಗಿದ್ದು, ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಿ ಪಾಕಿಸ್ತಾನ ಅವರನ್ನು ಬಂಧಿಸಿತ್ತು. ನಂತರ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಭಾರತದ ಮಾಜಿ ನೌಕಾಪಡೆ ಅಧಿಕಾರಿಯಾಗಿದ್ದ ಜಾಧವ್ ಅವರನ್ನು 2016 ರ ಮಾರ್ಚ್ 3 ರದು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು.

ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ಪಾಕಿಸ್ತಾನದ ನಡೆಯನ್ನು ವಿರೋಧಿಸಿ ಭಾರತ ನೆದರ್ಲೆಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಬುಧವಾರ ಈ ಬಗ್ಗೆ ತೀರ್ಪು ನೀಡಿದ್ದ ನ್ಯಾಯಾಲಯ, ಕುಲಭೂಷಣ್ ಅವರಿಗೆ ಪಾಕಿಸ್ತಾನ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಅಮಾನತು ಮಾಡಿತ್ತು.












Click it and Unblock the Notifications