ದೆಹಲಿ ಚುನಾವಣೆ ಫಲಿತಾಂಶ ಬದಲಾಯಿಸುವುದೇ ರಾಜಕಾರಣದ ದಿಕ್ಕು?
ಬೆಂಗಳೂರು, ಫೆಬ್ರವರಿ 11: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಎಎಪಿಯು ಭಾರಿ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಹಿಡಿದಿದೆ. ಆ ಮೂಲಕ 'ಅಭಿವೃದ್ಧಿ ರಾಜಕೀಯ'ಕ್ಕೆ ಮೇಲುಪಂಕ್ತಿ ಹಾಕಿಕೊಟ್ಟಿದೆ.
ರಾಷ್ಟ್ರ ರಾಜಧಾನಿಗೆ ನಡೆದ ಚುನಾವಣೆ ಸಹಜವಾಗಿಯೇ ಇಡೀಯ ದೇಶದ ಗಮನ ಸೆಳೆದಿತ್ತು. ಎಎಪಿಯ ಅಭಿವೃದ್ಧಿ ಮತ್ತು ಬಿಜೆಪಿಯ 'ಏಕಪಕ್ಷೀಯ ರಾಷ್ಟ್ರವಾದ'ದ ನಡುವಿನ ಕದನವೆಂದೇ ಈ ಚುನಾವಣೆಯನ್ನು ಬಿಂಬಿಸಲಾಗಿತ್ತು. ಆದರೆ ಅಂತಿಮವಾಗಿ ಜನರು ಅಭಿವೃದ್ಧಿಗೆ ಮತ ನೀಡಿದ್ದಾರೆ.
ದೆಹಲಿ ಚುನಾವಣೆ ರಾಷ್ಟ್ರದ ಒಟ್ಟಾರೆ ರಾಜಕಾರಣ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿಯೇ ಇದೆ. ಹಿಂದಿನಿಂದಲೂ ನಡೆದುಕೊಂಡು ಬಂದ ಚುನಾವಣಾ ಮಾದರಿಯಿಂದ ಭಿನ್ನವಾಗಿ ದೆಹಲಿ ಚುನಾವಣೆ ನಡೆದಿದ್ದು, ಗೆದ್ದ ಪಕ್ಷವು ಚುನಾವಣೆ ಗೆಲ್ಲುವ ಬಗ್ಗೆ ರಾಜಕೀಯ ಪಕ್ಷಗಳು ಹೊಂದಿದ್ದ ಸ್ಥಾಪಿತ ತಂತ್ರಗಳನ್ನು ಬದಿಗೆ ಸರಿಸಿ, ಹಣ, ಜಾತಿ, ಹುಸಿ ಭರವಸೆ, ಧರ್ಮಗಳನ್ನು ಚುನಾವಣಾ ವಿಷಯ ಮಾಡಿಕೊಳ್ಳದೆ ಕೇವಲ ಅಭಿವೃದ್ಧಿ ಆಧಾರದಲ್ಲಿ ಮತ ಕೇಳಿತು ಮತ್ತು ಪಡೆದುಕೊಂಡಿತು.

ಸ್ಥಾಪಿತ ತಂತ್ರಗಳನ್ನು ಬಿಡುತ್ತಾರೆಯೇ ರಾಜಕಾರಣಿಗಳು
ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಚುನಾವಣೆ ಗೆಲ್ಲಲು ಅನುಸರಿಸುತ್ತಿರುವ ಹಣ, ಜಾತಿ ಲೆಕ್ಕಾಚಾರಗಳು, ಹಿಂದಿನ ಬಾಗಲಿನ ರಾಜಕೀಯ, ಆಪರೇಷನ್ ರಾಜಕೀಯ ಇವೆಲ್ಲವನ್ನೂ ಬಿಟ್ಟು 'ಕೆಲಸದ ಮಾಡಿ' ಚುನಾವಣೆ ಗೆಲ್ಲಬಹುದು ಎಂಬುದನ್ನು ಎಎಪಿಯು ಎಲ್ಲಾ ರಾಜಕೀಯ ಪಕ್ಷಗಳಿಗೆ ತೋರಿಸಿಕೊಟ್ಟಿದೆ.

ದೆಹಲಿ ಜನ ಮತ ಹಾಕಿದ್ದು ನಾಲ್ಕೇ ವಿಷಯಕ್ಕೆ
ದೆಹಲಿ ಚುನಾವಣೆಯಲ್ಲಿ ಮತದಾರ ಮತ ಹಾಕಿರುವುದು ನಾಲ್ಕೇ ವಿಷಯಕ್ಕೆ. ವಿದ್ಯುತ್, ನೀರು, ಶಿಕ್ಷಣ, ಆಸ್ಪತ್ರೆ. ಈ ನಾಲ್ಕನ್ನೂ ಅರವಿಂದ ಕೇಜ್ರಿವಾಲ್ ನೇತೃತ್ವದ ಕೇಜ್ರಿವಾಲ್ ಸರ್ಕಾರ ಉಚಿತಗೊಳಿಸಿಬಿಟ್ಟಿತು. ಸರ್ಕಾರಿ ಶಾಲೆಗಳನ್ನು ಅದ್ಭುತ ಎನ್ನಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಿತು. ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡುವ ಜೊತೆಗೆ ಉಚಿತ ಮಾಡಿಬಿಟ್ಟಿತು. ಇವಿಷ್ಟೆ ಸಾಕಾಯಿತು ಜನರಿಗೆ ಮತ್ತೆ ಎಎಪಿಯನ್ನು ಆರಿಸಲು.

60,000 ಕೋಟಿ ಬಜೆಟ್ ಗಾತ್ರ ಹೊಂದಿರುವ ದೆಹಲಿ
ಕೇವಲ 60,000 ಸಾವಿರ ಕೋಟಿ ಬಜೆಟ್ ಗಾತ್ರವನ್ನು ಹೊಂದಿರುವ ದೆಹಲಿ ಇಷ್ಟೆಲ್ಲಾ ಮೂಲಭೂತ ಸೌಲಭ್ಯವನ್ನು ಉಚಿತವಾಗಿ ಒದಗಿಸಿ, ಹೈಕೆಟ್ ಶಾಲೆ, ಆಸ್ಪತ್ರೆ ನಿರ್ಮಿಸಬಹುದೆಂದರೆ, 2.34 ಲಕ್ಷ ಕೋಟಿ ಬಜೆಟ್ ಗಾತ್ರ ಹೊಂದಿರುವ ಕರ್ನಾಟಕ ಎಷ್ಟು ಅಭಿವೃದ್ಧಿ ಮಾಡಬಹುದು. 4.28 ಲಕ್ಷ ಕೋಟಿ ಬಜೆಟ್ ಗಾತ್ರ ಹೊಂದಿರುವ ಉತ್ತರ ಪ್ರದೇಶ ಎಷ್ಟೆಲ್ಲಾ ಅಭಿವೃದ್ಧಿ ಮಾಡಬಹುದು.

ಯಾವತ್ತೂ ಮತದಾರರು ಭ್ರಷ್ಟರಾಗಿಲ್ಲ
ರಾಜಕಾರಣಿಗಳು ಮತದಾರರನ್ನು ಭ್ರಷ್ಟರನ್ನಾಗಿ ಮಾಡಿದ್ದಾರೆ ಅಷ್ಟೆ. ಅಭಿವೃದ್ಧಿಗೆ ಮತಕೊಡದಷ್ಟು ಭ್ರಷ್ಟಮತದಾರ ಯಾವ ಕಾಲದಲ್ಲೂ ಇಲ್ಲ. ಈಗಲೂ ಅಷ್ಟೆ ಹಿಂದೆಯೂ ಅಷ್ಟೆ. ಒಂದೊಮ್ಮೆ ಎಲ್ಲ ರಾಜ್ಯದ ಹಾಗೂ 'ಸ್ಥಾಪಿತ ರಾಜಕಾರಣ ತಂತ್ರ'ಗಳನ್ನು ಬದಿಗೆ ಸರಿಸಿ ಜನ ರಾಜಕಾರಣವನ್ನು ಮಾಡಲು ದೆಹಲಿ ಚುನಾವಣಾ ಫಲಿತಾಂಶ ಪ್ರೇರಿಪಿಸುವ ಸಾಧ್ಯತೆ ಇದೆ.

ಆರು ಪ್ರಮುಖ ರಾಜ್ಯಗಳ ಚುನಾವಣೆ ಇದೆ
ಈ ವರ್ಷ ಹಾಗೂ ಮುಂದಿನ ವರ್ಷದಲ್ಲಿ ಆರು ಪ್ರಮುಖ ರಾಜ್ಯಗಳ ಚುನಾವಣೆಗಳಿವೆ. ಬಿಹಾರ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ಚುನಾವಣೆಗಳು ನಡೆಯಲಿವೆ. ಈ ರಾಜ್ಯಗಳ ಸರ್ಕಾರಗಳು ದೆಹಲಿ ಜನ ಅಭಿವೃದ್ಧಿಯನ್ನು ಅಪ್ಪಿಕೊಂಡ ರೀತಿಯನ್ನು ನೋಡಿರುತ್ತಾರೆ. ಚುನಾವಣೆಗೆ ಸ್ವಲ್ಪ ಸಮಯವಷ್ಟೆ ಇರುವ ಕಾರಣ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ.












Click it and Unblock the Notifications