ನವದೆಹಲಿಯಲ್ಲೂ ಚೀನಾ ಆನ್‌ಲೈನ್ ಲೋನ್ ಆ್ಯಪ್ ವಂಚನೆ: ನಾಲ್ವರ ಬಂಧನ
ನವದೆಹಲಿ, ಜುಲೈ. 20: ದೆಹಲಿ ಪೊಲೀಸರು ಬುಧವಾರ ಚೀನಾದ ಸಾಲದ ಆಪ್ ಬಳಸಿ ಬಹುಕೋಟಿ ವಂಚನೆ ಮತ್ತು ಸುಲಿಗೆ ದಂಧೆಯನ್ನು ಭೇದಿಸಿದ್ದು, ಹಗರಣದ ಹಿಂದಿನ ಮಾಸ್ಟರ್ ಮೈಂಡ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಏತನ್ಮಧ್ಯೆ, ದಂಧೆಗೆ ಸಹಾಯ ಮಾಡಲು ನಿಯೋಜಿಸಲಾದ 149 ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಬಂಧನದ ವೇಳೆ 153 ಹಾರ್ಡ್ ಡಿಸ್ಕ್‌ಗಳು, ಮೂರು ಲ್ಯಾಪ್‌ಟಾಪ್‌ಗಳು, 141 ಕೀಪ್ಯಾಡ್ ಮೊಬೈಲ್ ಫೋನ್‌ಗಳು, 10 ಆಂಡ್ರಾಯ್ಡ್ ಫೋನ್‌ಗಳು ಮತ್ತು ನಾಲ್ಕು ಡಿವಿಆರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಇಬ್ಬರು ಚೀನಾ ಪ್ರಜೆಗಳೊಂದಿಗೆ ಸಂಪರ್ಕದಲ್ಲಿದ್ದರು. ಅವರು ಸಾಲದ ಅಪ್ಲಿಕೇಶನ್ ಅನ್ನು ಚಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಗರಣದ ಮಾಸ್ಟರ್ ಮೈಂಡ್ ಅನಿಲ್ ಕುಮಾರ್, ಅಲೋಕ್ ಶರ್ಮಾ (24), ಅವನೀಶ್ (22), ಮತ್ತು ಕಣ್ಣನ್ (35) ಎಂದು ಗುರುತಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ.
ಜುಲೈ 14 ರಂದು ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ಹಿಮಾಂಶು ಗೋಯೆಲ್ ಎಂಬುವವರು ಸಲ್ಲಿಸಿದ ದೂರಿನ ಪ್ರಕಾರ, ಫೇಸ್‌ಬುಕ್ ಮೂಲಕ ಬ್ರೌಸ್ ಮಾಡುವಾಗ, 50,000 ರೂಪಾಯಿಗಳ ಸಾಲದ ಭರವಸೆ ನೀಡುವ ಜಾಹೀರಾತನ್ನು ನೋಡಿದ್ದೇನೆ ಎಂದು ಗೋಯೆಲ್ ತಿಳಿಸಿದರು.
ಮುಂದುವರಿದು ಆನ್ ಸ್ಟ್ರೀಮ್ ಎಂಬ ಸಾಲದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಅವರು ಕೆಲವೊಂದು ಅನುಮತಿ ನೀಡಿದ ನಂತರ ಫೋನ್‌ನಲ್ಲಿ ಇತರ ವಿಷಯಗಳ ಜೊತೆಗೆ ಅಪರಾಧಿಗಳು ಸಂಪರ್ಕ ಸಾಧಿಸಲು ಅಂದರೆ ಗ್ಯಾಲರಿಗಳನ್ನು ಪ್ರವೇಶಿಸಲು ಅಪ್ಲಿಕೇಶನ್ ಅನುಮತಿಯನ್ನು ಕೇಳಿದೆ.
ಇದರ ನಂತರ, ಅವರಿಗೆ 6,870 ರೂ. ಸಾಲವನ್ನು ನೀಡಲಾಯಿತು. ಬಳಿಕ ಆರೋಪಿಗಳು ಅವರ ಕಾಂಟ್ಯಾಕ್ಸ್ ಮತ್ತು ಫೋಟೋಗಳನ್ನು ಬಳಸಿಕೊಂಡು ಅವರಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಬಳಿಕ ಒಂದು ಲಕ್ಷ ಹಣ ನೀಡಿದ್ದರೂ ಇನ್ನೂ ಹೆಚ್ಚಿನ ಹಣ ನೀಡುವಂತೆ ಕಿರುಕುಳ ನೀಡುತ್ತಿರುವುದಾಗಿ ದೂರಿನಲ್ಲಿ ಹಿಮಾಂಶು ಗೋಯೆಲ್ ತಿಳಿಸಿದ್ದಾರೆ.
ಪೊಲೀಸರ ತನಿಖೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದ್ದು, ಫ್ಲೈ ಹೈ ಗ್ಲೋಬಲ್ ಸರ್ವಿಸಸ್ ಆ್ಯಂಡ್ ಟೆಕ್ನಾಲಜಿ ಹೆಸರಿನಲ್ಲಿ ಕಳೆದ ಎರಡು ವರ್ಷಗಳಿಂದ ದ್ವಾರಕಾ ಸೆಕ್ಟರ್ -7ರ ಕಟ್ಟಡದ ಮೂರು ಮಹಡಿಗಳಲ್ಲಿ ಬೃಹತ್ ಕಾಲ್ ಸೆಂಟರ್ ನಡೆಸುತ್ತಿರುವುದು ಪತ್ತೆಯಾಗಿದೆ. ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದಾಗ ದ್ವಾರಕಾ ಸೆಕ್ಟರ್ -3 ರ ನಿವಾಸಿ ಅನಿಲ್ ಕುಮಾರ್ ಎಂಬ ಮಾಲೀಕನೊಂದಿಗೆ 149 ಟೆಲಿಕಾಲರ್‌ಗಳು ಮತ್ತು ಮೂವರು ತಂಡದ ನಾಯಕರನ್ನು ನೇಮಿಸಿಕೊಂಡು ಇಡೀ ಸಿಂಡಿಕೇಟ್ ನಡೆಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದರು.

ಅವಹೇಳನಕಾರಿ ವಾಟ್ಸಾಪ್ ಸಂದೇಶ
ಅವರು ಸಿಲ್ಪಾನಿ ಇಂಟರ್‌ನ್ಯಾಶನಲ್ ಹೆಸರಿನಲ್ಲಿ 300 ಸಿಮ್ ಕಾರ್ಡ್‌ಗಳನ್ನು ಖರೀದಿಸಿದ್ದು, ಅದರಲ್ಲಿ 100 ಸಿಮ್ ಕಾರ್ಡ್‌ಗಳನ್ನು ಬಳಸಿದ್ದಾರೆ. ಇದರಿಂದ ಅವಹೇಳನಕಾರಿ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿ, ಬೆದರಿಸಿ, ವ್ಯಕ್ತಿಗಳನ್ನು ಸುಲಿಗೆ ಮಾಡಲು ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಲ್ಬರ್ಟ್ ಮತ್ತು ಟ್ರೇ ಎಂಬುವವರೊಂದಿಗೆ ಸಂಪರ್ಕ
ಆರೋಪಿಗಳು ತಮ್ಮ ಚೀನಾದ ಸಹವರ್ತಿಗಳೊಂದಿಗೆ ಸೇರಿಕೊಂಡು ಅಪಾರ ಪ್ರಮಾಣದ ಹಣವನ್ನು ಸುಲಿಗೆ ಮಾಡಿದ್ದರು. ಅವರು ತಮ್ಮ ಸಂವಹನಕ್ಕಾಗಿ ಬಹುಭಾಷಾ ಡಿಂಗ್ ಟಾಕ್ ಅಪ್ಲಿಕೇಶನ್‌ನಲ್ಲಿ ಮಾತನಾಡುತ್ತಿದ್ದರು. ಇಲ್ಲಿಯವರೆಗೆ ಅವರು ಆಲ್ಬರ್ಟ್ ಮತ್ತು ಟ್ರೇ ಎಂಬ ಇಬ್ಬರು ಚೀನಾದವರಿಗೆ 10 ಕೋಟಿ ರೂ. ಪಾವತಿಸಿ ಮಾರ್ಚ್ 2021 ರಿಂದ ಮೂರು ಕೋಟಿ ಕಮಿಷನ್ ಪಡೆದಿದ್ದಾರೆ. ಆರೋಪಿತ ಸಂಸ್ಥೆಯು ಜನರ ಛಾಯಾಚಿತ್ರಗಳನ್ನು ಮಾರ್ಫಿಂಗ್ ಮಾಡುವ ಮೂಲಕ ಕಿರುಕುಳ ನೀಡುತ್ತಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಬೆದರಿಕೆ ಹಾಕಿ ಹಣ ವಸೂಲಿ
ಸಿಂಡಿಕೇಟ್ ಸೆಕ್ಟರ್ - 7 ದ್ವಾರಕಾದಿಂದ ಕಾಲ್ ಸೆಂಟರ್ ಅತ್ಯಂತ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಟೆಲಿಕಾಲರ್‌ಗಳು ಸಾಲ ಪಡೆಯುವವರ ಸಂಪೂರ್ಣ ಮಾಹಿತಿ ಪಡೆದುಕೊಂಡು ಬೆದರಿಕೆ ಹಾಕಿ ಬಲಿಪಶು ಮಾಡಿ ಅವರ ಸಂಬಂಧಿಕರ ಪೋಟೋ ಮಾರ್ಪಿಂಗ್ ಮಾಡಿ ಅವಹೇಳನಕಾರಿ ಸಂದೇಶ ಕಳುಹಿಸುತ್ತಿದ್ದರು. ಮತ್ತು ಚಾಟ್‌ಗಳನ್ನು ಮಾಡಿ ಹೆದರಿಸುತ್ತಿದ್ದರು. ಅಲ್ಲದೆ ಆಧಾರ್ ಮತ್ತು ಪ್ಯಾನ್‌ಗಳನ್ನು ಮೊದಲೇ ಪಡೆದುಕೊಂಡು ಅದರ ಪೋಟೋಗಳನ್ನು ಕಳುಹಿಸುತ್ತಿದ್ದರು.

150 ಮಂದಿಯ ನೇಮಕ
ದಂಧೆಯ ಹಿಂದಿನ ಮಾಸ್ಟರ್ ಮೈಂಡ್ ಅನಿಲ್ ಎಂಬುವವನನ್ನು ಆಲ್ಬರ್ಟ್ ಮತ್ತು ಟ್ರೆ ಎಂಬ ಇಬ್ಬರು ಚೀನಾದವರು ಸಂಪರ್ಕಿಸಿದ್ದರು. ಡಿಂಗ್ ಟಾಕ್ ಆಪ್ ನಲ್ಲಿ ಅವರೊಂದಿಗೆ ಮಾತನಾಡುತ್ತಿದ್ದರು. ಅವರ ನೆರವಿನಿಂದ ಆರೋಪಿಗಳು ಸುಮಾರು 150 ಮಂದಿಯನ್ನು ನೇಮಿಸಿಕೊಂಡು ಈ ಸುಲಿಗೆ ದಂಧೆ ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications