ಬಿಜೆಪಿ ಗೇಮ್ ಪ್ಲಾನ್, ಅಕ್ಷಯ ತೃತೀಯದಿಂದ ಅಮಿತ್ ಶಾ ದೇಶಾದ್ಯಂತ ಪ್ರವಾಸ
ಏಪ್ರಿಲ್ 29ರ ಶನಿವಾರದಿಂದ 95 ದಿನಗಳ ಕಾಲ ದೇಶದಾದ್ಯಂತ ಪ್ರವಾಸ ನಡೆಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದ ಬಲ ವರ್ಧನೆಗೆ ಗಮನ ಕೇಂದ್ರೀಕರಿಸಲಿದ್ದಾರೆ. ಇದು ಮುಂದಿನ ಲೋಕಸಭೆ ಚುನಾವಣೆಯ ತಯಾರಿ ಎಂದೇ ತಿಳಿಯಬಹುದಾಗಿದೆ
ನವದೆಹಲಿ, ಏಪ್ರಿಲ್ 28: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶನಿವಾರದಿಂದ (ಅಕ್ಷಯ ತೃತೀಯಾ) 95 ದಿನಗಳ ಕಾಲ ಭಾರತದಾದ್ಯಂತ ಪ್ರವಾಸ ಮಾಡಲಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ 120 ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಎಲ್ಲೆಲ್ಲಿ ಬಿಜೆಪಿ ಸೋಲನ್ನು ಅನುಭವಿಸಿತ್ತೋ ಅಂಥಲ್ಲಿ ಗೆಲುವು ದಾಖಲಿಸಲು ಏನು ಮಾಡಬೇಕೋ ಅದಕ್ಕೆ ತಂತ್ರ ಹೆಣೆಯಲು ಈ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲಿಗೆ ಜಮ್ಮುಗೆ ಭೇಟಿ ನೀಡಲಿದ್ದಾರೆ. ಒಂದೊಂದು ಕಡೆ ಒಂದರಿಂದ ಮೂರು ದಿನ ಕಳೆಯುವುದಾಗಿ ಮಾಧ್ಯಮದವರಿಗೆ ಶಾ ತಿಳಿಸಿದ್ದಾರೆ.[ಬಿಜೆಪಿಯ ಮತ ಬೇಟೆಗಾರ ಅಮಿತ್ ಶಾಗೆ ಬೆಂಗಳೂರಿನಲ್ಲಿ ಮನೆ ಹುಡುಕಾಟ]

ಚುನಾವಣೆ ಆದ್ಯತೆ ಮೇರೆಗೆ ರಾಜ್ಯ ಪ್ರವಾಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. "ನಾವು 2014ರಲ್ಲಿ ಸೋತಿದ್ದ ಲೋಕಸಭಾ ಸ್ಥಾನಗಳ ಪೈಕಿ ಈ ಬಾರಿ ಹೆಚ್ಚುವರಿಯಾಗಿ ನೂರಿಪ್ಪತ್ತು ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿಯಿದೆ" ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಲದ ಮೇಲೆ ಶಾ ಗಮನ ಕೇಂದ್ರೀಕೃತವಾಗಿದೆ. ಒಡಿಶಾ, ತೆಲಂಗಾಣ ಮತ್ತು ಕೇರಳ ಪ್ರವಾಸ ಮುಗಿಸಿ, ಗುರುವಾರ ರಾತ್ರಿಯಷ್ಟೇ ಶಾ ಹಿಂತಿರುಗಿದ್ದಾರೆ. ಈ ರಾಜ್ಯಗಳಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ 102 ಸ್ಥಾನಗಳ ಪೈಕಿ 4ರಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು. ಇನ್ನು ಉತ್ತರಪ್ರದೇಶದಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆ ಮಾಡುವ ಇಂಗಿತ ಕೂಡ ಅವರು ವ್ಯಕ್ತಪಡಿಸಿದ್ದಾರೆ.[ಮೋದಿ ಅಲೆಯನ್ನು ಹೊಸಕಿಹಾಕುತ್ತಿರುವ ಯಡ್ಡಿ-ಈಶು ಜಟಾಪಟಿ]

ಪಕ್ಷವು ರಾಜ್ಯಗಳನ್ನು ಚುನಾವಣೆ ಪ್ರಾಮುಖ್ಯತೆ ಮೇಲೆ ಎ, ಬಿ ಮತ್ತು ಸಿ ಎಂದು ವಿಂಗಡಿಸಿದ್ದು, ಅದರ ಆಧಾರದಲ್ಲಿ ಆಯಾ ರಾಜ್ಯಗಳಲ್ಲಿ ಮೂರು, ಎರಡು ಅಥವಾ ಒಂದು ದಿನವನ್ನು ಅಲ್ಲಿ ಶಾ ಮೀಸಲಿಡಲಿದ್ದಾರೆ. ದೀನ್ ದಯಾಳ್ ಉಪಾಧ್ಯ ಅವರ 101ನೇ ಜನ್ಮದಿನ ಇರುವ ಸೆಪ್ಟೆಂಬರ್ 25ರಂದು ಶಾ ಪ್ರವಾಸ ಮುಗಿಯಲಿದೆ.

ಬಿಜೆಪಿಯು 3.52 ಲಕ್ಷ ಮಂದಿ ಸ್ವಯಂ ಸೇವಕರು, ಪಕ್ಷಕ್ಕಾಗಿ ಪೂರ್ಣಾವಧಿಯಾಗಿ ದುಡಿಯುವವರನ್ನು ನೇಮಿಸಿಕೊಳ್ಳುತ್ತಿದೆ. ಅವರು ಹದಿನೈದು ದಿನದಿಂದ ವರ್ಷದವರೆಗೆ ಪಕ್ಷಕ್ಕಾಗಿ ದುಡಿಯುತ್ತಾರೆ. ಆರುನೂರು ಮಂದಿ ಪೂರ್ಣಾವಧಿಯಾಗಿ ದುಡಿಯುವವರನ್ನು ನೇಮಿಸುತ್ತಿದೆ ಎಂದು ಶಾ ಹೇಳಿದ್ದಾರೆ.[ಕರ್ನಾಟಕದ ಜನತೆಯ ಮಿಡಿತ ಅರಿಯಲು ಅಮಿತ್‌ಗೆ ಏಕೆ ಸಾಧ್ಯವಾಗಿಲ್ಲ?]

ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಪೂರ್ಣಾವಧಿ ಕಾರ್ಯಕರ್ತರನ್ನು ನೇಮಿಸಲಾಗುತ್ತದೆ. 2019ರ ಲೋಕಸಭೆ ಚುನಾವಣೆವರೆಗೆ ಪಕ್ಷ ಬಲವರ್ಧನೆಗೆ ಶ್ರಮಿಸುತ್ತಾರೆ. ಇನ್ನು ಪಕ್ಷವು ಎಲ್ಲಿ ಬಹಳ ಹಿಂದಿನಿಂದಲೂ ದುರ್ಬಲವಾಗಿದೆಯೋ ಅಲ್ಲಿ ಐದು ಮಂದಿಯ ಗುಂಪನ್ನು ರಚಿಸಿ, ಒಟ್ಟಾರೆ ಚುನಾವಣೆಯ ಜವಾಬ್ದಾರಿಯನ್ನು ವಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
95 ದಿನದ ಪ್ರವಾಸದಲ್ಲಿ ಐದು ರಾಜ್ಯಗಳಿಗೆ ಅಮಿತ್ ಶಾ ಮೂರು ದಿನ ಮೀಸಲಿಡಲಿದ್ದಾರೆ. ಪಶ್ಚಿಮ ಬಂಗಾಲಕ್ಕೆ ಈಚೆಗೆ ಶಾ ಭೇಟಿ ನೀಡಿದ್ದೂ ಅದೇ ಯೋಜನೆ ಅಡಿಯಲ್ಲೇ. ಬಂಗಾಲ ಹೊರತುಪಡಿಸಿ ಒಡಿಶಾ, ತೆಲಂಗಾಣ, ಲಕ್ಷದ್ವೀಪ ಮತ್ತು ಈ ವರ್ಷ ಚುನಾವಣೆ ಎದುರಾಗಬಹುದಾದ ಗುಜರಾತ್ ಪ್ರವಾಸ ಕೈಗೊಳ್ಳಲಿದ್ದಾರೆ.












Click it and Unblock the Notifications