ಎಎಪಿ ತೊರೆದ ಅಲ್ಕಾ ಲಂಬಾ " ಕೈ " ಹಿಡಿಯದ ಮತದಾರರು
ನವದೆಹಲಿ, ಫೆಬ್ರವರಿ 11: "ಹಿಂದೂ ಮತ್ತು ಮುಸ್ಲಿಂ ಮತಗಳ ಧೃವೀಕರಣವಾಗಿದೆ. ನಾನು ಸೋಲನ್ನು ಸ್ವೀಕರಿಸುತ್ತೇನೆ ಆದರೆ, ಹೋರಾಟ ಮುಂದುವರೆಯಲಿದೆ" ಎಂದು ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಟ್ವೀಟ್ ಮಾಡಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆ 2020ರಲ್ಲಿ ಕಾಂಗ್ರೆಸ್ ಖಾತೆ ತೆರೆಯಲು ವಿಫಲವಾಗಿದೆ.
ಎಎಪಿಯಲ್ಲಿದ್ದ ಅಲ್ಕಾ ಲಂಬಾ ಚಾಂದಿನಿ ಚೌಕ್ ಕ್ಷೇತ್ರದ ಶಾಸಕಿಯಾಗಿದ್ದರು. ನಂತರ ಎಎಪಿಯಿಂದ ಅನರ್ಹಗೊಂಡು ಪಕ್ಷ ತೊರೆದು ತಮ್ಮ ಮೂಲ ರಾಜಕೀಯ ಪಕ್ಷ ಕಾಂಗ್ರೆಸ್ ಕೈ ಹಿಡಿದಿದ್ದರು. ಆದರೆ, ದೆಹಲಿಯ ಪುರಾತನ ಕ್ಷೇತ್ರ ಚಾಂದಿನಿ ಚೌಕ್ ನ ಮತದಾರರು ಮಾತ್ರ ಲಂಬಾ ಅವರ ಕೈ ಹಿಡಿಯಲಿಲ್ಲ.
ಚುನಾವಣಾ ಆಯೋಗದ ಅಧಿಕೃತ ವೆಬ್ ತಾಣದ ಮಾಹಿತಿಯಂತೆ ಈ ಸಮಯಕ್ಕೆ ಮಿಸ್ ಲಂಬಾ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ. ಎಎಪಿಯ ಪ್ರಹ್ಲಾದ್ ಸಿಂಗ್ ಸಹ್ವಾನಿ 23, 281 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಸುಮನ್ ಕುಮಾರ್ ಗುಪ್ತಾ ಎರಡನೇ ಸ್ಥಾನದಲ್ಲಿದ್ದಾರೆ. 70 ಕ್ಷೇತ್ರಗಳ ಪೈಕಿ ಎಎಪಿ 63, ಬಿಜೆಪಿ + 7 ಸ್ಥಾನ ಗಳಿಸಿವೆ. ಎಎಪಿ ಮೂರನೇ ಬಾರಿಗೆ ಅಧಿಕಾರ ಗಳಿಸುವುದು ನಿಶ್ಚಿತವಾಗಿದೆ.

ರೆಬೆಲ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅಲ್ಕಾ
ಎಎಪಿಯಲ್ಲಿ ಸದಾಕಾಲ ರೆಬೆಲ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅಲ್ಕಾ ಲಂಬಾ ಅವರು ರಾಜೀವ್ ಗಾಂಧಿ ಅವರ ಭಾರತ ರತ್ನ ಹಿಂಪಡೆಯುವ ನಿಲುವಳಿಗೆ ವಿರೋಧಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಎಎಪಿ ಕ್ರಮವನ್ನು ಪ್ರಶ್ನಿಸಿದ್ದರು. ಇದಾದ ಬಳಿಕ ಕೇಜ್ರಿವಾಲ್ ಸರ್ಕಾರದ ನೀತಿ ಹಾಗೂ ಕಾರ್ಯಕರ್ತರ ಬಗ್ಗೆ ತಾರತಮ್ಯವನ್ನು ಸದಾ ಪ್ರಶ್ನಿಸಿ, ಹಲವಾರು ಮಂದಿಯ ವಿರೋಧ ಕಟ್ಟಿಕೊಂಡರು. ಲೋಕಸಭೆ ಚುನಾವಣೆ ವೇಳೆ ಕೇಜ್ರಿವಾಲ್ ರೋಡ್ ಶೋಗೆ ಹೋಗಿರಲಿಲ್ಲ. ಪಕ್ಷದ ಅಧಿಕೃತ ವಾಟ್ಸಾಪ್ ಗ್ರೂಪಿನಿಂದ ಲಂಬಾರನ್ನು ತೆಗೆದು ಹಾಕಲಾಗಿತ್ತು. ಪಕ್ಷದ ಸೋಲಿಗೆ ಕೇಜ್ರಿವಾಲ್ ಕಾರಣ ಎಂದಿದ್ದರು.

ವಿದ್ಯಾರ್ಥಿ ಸಂಘಟನೆ ನಾಯಕಿಯಾಗಿ
ವಿದ್ಯಾರ್ಥಿ ಸಂಘಟನೆ ನಾಯಕಿಯಾಗಿ 90ರ ದಶಕದಲ್ಲಿ ಬೆಳೆದ ಲಂಬಾ ಅವರು 1995ರಲ್ಲಿ ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆಯಾಗಿದ್ದರು. ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯುಐನ ಸಕ್ರಿಯ ಸದಸ್ಯರಾಗಿದ್ದ ಲಂಬಾ ಅವರು 2002ರಲ್ಲಿ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ ಲಂಬಾ, ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದಿಂದ 2015ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. "2013ರಿಂದ 2020 ರ ತನಕ ನನ್ನ ಪಯಣ ಆಶಾದಾಯಕವಾಗಿತ್ತು. ಎಲ್ಲಾ ಕ್ರಾಂತಿಕಾರಿ ಸಂಗಾತಿಗಳಿಗೆ ನನ್ನ ಅಭಿನಂದನೆಗಳು" ಎಂದಿದ್ದರು. ಮತ್ತೆ ಕಾಂಗ್ರೆಸ್ ಸೇರಿದ್ದರು.

2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ್ದ ಲಂಬಾ
2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ್ದ ಲಂಬಾ, ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಸ್ಥಳೀಯವಾಗಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಆದರೆ, ಶೀಲಾ ದೀಕ್ಷಿತ್ ಅವರು ಹಿಂತಿರುಗಿದ ಬಳಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ಅಸಾಧ್ಯವಾಯಿತು. ಲೋಕಸಭೆ ಚುನಾವಣೆ 2019ರಲ್ಲಿ 7ಕ್ಕೆ ಏಳು ಕ್ಷೇತ್ರಗಳಲ್ಲಿ ಕಳಪೆ ಸಾಧನೆ ಮಾಡಿದ ಎಎಪಿಯ ಸೋಲಿಗೆ ಯಾರು ಹೊಣೆ ಎಂದು ಅರವಿಂದ್ ಕೇಜ್ರಿವಾಲ್ ರನ್ನು ಅಲ್ಕಾ ಪ್ರಶ್ನಿಸಿದ್ದರು.

ಲೋಕ ಚುನಾವಣೆ ವೇಳೆ ಎಎಪಿ ಅಭ್ಯರ್ಥಿ ಬೆಂಬಲಿಸಿರಲಿಲ್ಲ
"ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಏಕೆ ಸಾಧ್ಯವಾಗಲಿಲ್ಲ ದೆಹಲಿಯಲ್ಲದೆ, ಹರ್ಯಾಣ, ಪಂಜಾಬ್ ನಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಇನ್ನಿಲ್ಲದ್ದಂತೆ ಕಾಡಿ ಬೇಡಿದ ಎಎಪಿಯ ಹುಳುಕು ಎಲ್ಲರಿಗೂ ಗೊತ್ತಾಗಿದೆ, ದೆಹಲಿಯಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಏಕೆ ಸಾಧ್ಯವಾಗಲಿಲ್ಲ ಎಂಬುದು ಬಹಿರಂಗವಾಗಲಿ" ಎಂದು ಅಲ್ಕಾ ಆಗ್ರಹಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎಎಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲು ಅಲ್ಕಾ ನಿರಾಕರಿಸಿದ್ದರು. ಶಾಸಕ ಸ್ಥಾನ ಹೋದರೂ, ಪಕ್ಷದಿಂದ ಹೊರ ಹಾಕಿದರೂ ನಾನು ಚಾಂದಿನಿ ಚೌಕ್ ಜನತೆಗಾಗಿ ದುಡಿಯುತ್ತೇನೆ ಎಂದಿದ್ದರು.











Click it and Unblock the Notifications