ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿಯ ಸಹಾಯಕ್ಕೆ ಆಪ್ ಸಿದ್ಧ
ನವದೆಹಲಿ, ಫೆಬ್ರವರಿ 19: ಭಾರತದ ಕಲ್ಯಾಣಕ್ಕಾಗಿ ರಾಜಕೀಯ ಸಿದ್ಧಾಂತಗಳನ್ನು ಪರಿಗಣಿಸದೆ ಶಿಕ್ಷಣ ಮತ್ತು ಆರೋಗ್ಯ ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಲು ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು ತಮ್ಮ ಸರ್ಕಾರ ಸಿದ್ಧವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸರ್ಕಾರಿ ಶಾಲೆಗಳಲ್ಲಿ 12,430 ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. "ನಾನು ಇವತ್ತು ಒಂದು ಆಫರ್ ನೀಡುವುದಕ್ಕೆ ಬಯಸುತ್ತೇನೆ. ಯಾವುದೇ ರಾಜ್ಯ ಸರ್ಕಾರವಾಗಲಿ, ಅದು ಬಿಜೆಪಿ ಮತ್ತು ಕಾಂಗ್ರೆಸ್ ಎಂಬುದನ್ನು ಲೆಕ್ಕಿಸದೇ ಸಹಾಯ ಮಾಡುವುದಕ್ಕೆ ನಮ್ಮ ಸರ್ಕಾರ ಸಿದ್ಧವಿದೆ. ಶಿಕ್ಷಣದ ಮೂಲಸೌಕರ್ಯವನ್ನು ಸುಧಾರಿಸಲು ಬಯಸಿದರೆ ಸಾಲ ನೀಡುವುದಕ್ಕೆ ಸಿದ್ಧರಿದ್ದೇವೆ," ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಅದೇ ರೀತಿ, ಯಾವುದೇ ರಾಜ್ಯ ಸರ್ಕಾರವು ಮೊಹಲ್ಲಾ ಕ್ಲಿನಿಕ್‌ಗಳು, ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಲು ಬಯಸಿದರೆ, ನಾವು ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ಗೆ ಸಾಲ ನೀಡಲು ಸಿದ್ಧರಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೇಶದ ಪ್ರಗತಿಗೆ ಸಹಾಯ ಮಾಡುವ ಗುರಿ:
"ಎಲ್ಲಾ ರಾಜ್ಯಗಳಲ್ಲಿ ನಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾವು ದೇಶವು ಪ್ರಗತಿಯಾಗಬೇಕು ಎಂಬ ಉದ್ದೇಶವನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡುವುದಕ್ಕೆ ಬಯಸುತ್ತಿದ್ದೇವೆ. ಭ್ರಷ್ಟಾಚಾರ ಮುಕ್ತ ದೇಶ ನಿರ್ಮಾಣವನ್ನು ಆಪ್ ಬಯಸುತ್ತದೆ," ಎಂದರು.
12,430 ತರಗತಿಗಳು ದೇಶಕ್ಕೆ ಅರ್ಪಣೆ:
"ನಾನು ಈ 12,430 ತರಗತಿ ಕೊಠಡಿಗಳನ್ನು ದೇಶಕ್ಕೆ ಅರ್ಪಿಸುತ್ತಿದ್ದೇನೆ. ಅವರು ಭಯೋತ್ಪಾದಕರು ಎಂದು ಕರೆಯುವ ವ್ಯಕ್ತಿಯೇ ಇಂದು ಬಡವರು ಮತ್ತು ಶ್ರೀಮಂತರ ಮಕ್ಕಳು ಒಟ್ಟಿಗೆ ಓದುವ ಶಾಲೆಗಳನ್ನು ತೆರೆದಿದ್ದಾರೆ. ಅವರು ಭಯೋತ್ಪಾದನೆ ಆರೋಪ ಹೊರಿಸುತ್ತಿರುವ ವ್ಯಕ್ತಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಕನಸುಗಳನ್ನು ನನಸಾಗಿಸುತ್ತಿದ್ದಾನೆ," ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದರು.
ಶಾಲೆಗಳ ಬಗ್ಗೆ ರಾಜಕೀಯ ನಾಯಕರಲ್ಲಿ ಭಯ:
ರಾಜಕೀಯ ನಾಯಕರಿಗೆ ಶಾಲೆಗಳ ಬಗ್ಗೆ ಆತಂಕವಿದೆ. ಈ ಶಾಲೆಗಳಲ್ಲಿ ದೇಶಭಕ್ತರನ್ನು ಹುಟ್ಟು ಹಾಕಲಾಗುತ್ತದೆ. ಐದು ಅಥವಾ ಹತ್ತು ವರ್ಷಗಳ ನಂತರದಲ್ಲಿ ಈ ಶಾಲೆಗಳಲ್ಲಿ ಕಲಿತ ವಿದ್ಯಾವಂತ ಮಕ್ಕಳು ಜಾತಿ ಅಥವಾ ಧರ್ಮದ ಆಧಾರದ ಮೇಲೆ ಮತದಾನ ಮಾಡುವುದಿಲ್ಲ. ಬದಲಿಗೆ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಮತದಾನ ಮಾಡುತ್ತಾರೆ ಎಂದ ಕೇಜ್ರಿವಾಲ್, ಭಗತ್ ಸಿಂಗ್ ಹೆಸರನ್ನು ಉಲ್ಲೇಖಿಸಿದರು. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರು ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಯನ್ನು ನೀಡಿದ್ದರು. ನಾನು ಇಂಕ್ವಿಲಾಬ್ ಜಿಂದಾಬಾದ್, ಶಿಕ್ಷಾ ಕ್ರಾಂತಿ ಜಿಂದಾಬಾದ್ ಎಂಬ ಘೋಷಣೆ ಕೂಗುತ್ತಿದ್ದೇನೆ," ಎಂದು ಹೇಳಿದರು.
ಏಳು ವರ್ಷದಲ್ಲಿ 20,000 ಶಾಲಾ ಕೊಠಡಿ ನಿರ್ಮಾಣ:
ದೆಹಲಿಯಲ್ಲಿ ಆಪ್ ಸರ್ಕಾರವು ಏಳು ವರ್ಷಗಳಲ್ಲಿ 20,000 ಶಾಲಾ ಕೊಠಡಿಗಳನ್ನು ನಿರ್ಮಿಸಿದೆ. ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಿರ್ಮಿಸಿದ ಕೊಠಡಿಗಳಿಗಿಂತ ಹೆಚ್ಚು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಕೇಜ್ರಿವಾಲ್, ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡಿದ್ದಾರೆ.
ಪಂಜಾಬಿನಲ್ಲಿ ಒಂದೇ ಹಂತದಲ್ಲಿ ಮತದಾನ:
ಪಂಜಾಬಿನ 117 ವಿಧಾನಸಭೆ ಕ್ಷೇತ್ರಗಳಿಗೆ ಒಂದು ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 20ರ ಭಾನುವಾರ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications