10 ವಾರಗಳ ಲಾಕ್‌ಡೌನ್ ಭಾರತಕ್ಕೆ ಅವಶ್ಯಕತೆಯಿದೆಯಂತೆ!
ನವ ದೆಹಲಿ, ಏಪ್ರಿಲ್ 23: ಭಾರತದಲ್ಲಿ ಲಾಕ್‌ಡೌನ್ ಶುರುವಾಗಿ ಇಂದಿಗೆ 30 ದಿನ ಕಳೆದಿದೆ. ಒಂದೊಂದೆ ದಿನವನ್ನು ಜನ ತಳ್ಳುತ್ತಿದ್ದಾರೆ. ಯಾವಾಗ ಲಾಕ್‌ಡೌನ್‌ನಿಂದ ಮುಕ್ತಿ ಸಿಗುತ್ತದೆಯೋ ಎಂದು ಎಲ್ಲರೂ ಕಾಯುತ್ತಿದ್ದಾರೆ. ಆದರೆ, ಈ ನಡುವೆ ಆಘಾತಕಾರಿ ಸುದ್ದಿಯೊಂದು ಬಂದಿದೆ.
ಭಾರತಕ್ಕೆ ಕೊರೊನಾ ಓಡಿಸಲು 10 ವಾರಗಳ ಲಾಕ್‌ಡೌನ್ ಅವಶ್ಯಕವಿದೆಯಂತೆ. ಈ ವಿಷಯವನ್ನು ರಿಚರ್ಡ್ ಹಾರ್ಟನ್ ತಿಳಿಸಿದ್ದಾರೆ. ರಿಚರ್ಡ್ ಹಾರ್ಟನ್ ವಿಶ್ವದ ಅತಿದೊಡ್ಡ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್‌ನ ಸಂಪಾದಕರಾಗಿದ್ದಾರೆ. ಭಾರತದ ಸ್ಥಿತಿಯನ್ನು ಗಮನಿಸಿದ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಲಾಕ್‌ಡೌನ್ ನಡುವೆಯೂ ಶೂಟಿಂಗ್ ಮಾಡಿದ ಯೋಗರಾಜ್ ಭಟ್!
ಅಮೆರಿಕದಲ್ಲಿ ಆರ್ಥಿಕತೆ ಉಳಿಸಿಕೊಳ್ಳಲು ಲಾಕ್‌ಡೌನ್ ಸಡಿಲಿಕೆ ಮಾಡುತ್ತಿದ್ದು, ಈ ರೀತಿ ಆರ್ಥಿಕತೆಗಾಗಿ ಲಾಕ್‌ಡೌನ್ ಕೈ ಬಿಡುವುದು ಸರಿಯಲ್ಲ ಎಂದು ರಿಚರ್ಡ್ ಹಾರ್ಟನ್ ಹೇಳಿದ್ದಾರೆ.

10 ವಾರಗಳ ಲಾಕ್‌ಡೌನ್ ಬೇಕಾಗಿದೆ
ಖಾಸಗಿ ಸುದ್ದಿವಾಹಿನಿಯಲ್ಲಿ ಕೊರೊನಾ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ಭಾರತಕ್ಕೆ 10 ವಾರಗಳ ಲಾಕ್‌ಡೌನ್ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಎರಡನೇ ಹಂತದ ಲಾಕ್‌ಡೌನ್ ಯಶಸ್ವಿಯಾದರೆ, ಕೊರೊನಾವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಇನ್ನೂ 10 ವಾರಗಳ ಲಾಕ್‌ಡೌನ್ ಬೇಕಾಗಿದೆ. ಆ ನಂತರ ಮಾತ್ರ ಜನ ಜೀವನ ಸಹಜ ಸ್ಥಿತಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಶಾಶ್ವತವಾಗಿ ತೊಡೆದು ಹಾಕಲು ಸಾಧ್ಯವಿಲ್ಲ
ಭಾರತದಲ್ಲಿ ಕೊರೊನಾ ತಡೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಮಾರ್ಚ್ 25 ರಿಂದ ಏಪ್ರಿಲ್ 14ರವರೆಗೆ ಮೊದಲ ಹಂತ ಹಾಗೂ ಏಪ್ರಿಲ್ 15 ರಿಂದ ಮೇ 3ರವರೆಗೆ ಎರಡನೇ ಹಂತದಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಆದರೆ, ಇಷ್ಟೆಲ್ಲ ಮಾಡಿದರೂ, ಶಾಶ್ವತವಾಗಿ ಕೊರೊನಾವನ್ನು ತೊಡೆದು ಹಾಕಲು ಸಾಧ್ಯವಿಲ್ಲ ಎಂದು ರಿಚರ್ಡ್ ಹಾರ್ಟನ್ ತಿಳಿಸಿದ್ದಾರೆ. ಅದು ತಾನಾಗಿಯೇ ನಶಿಸಿ ಹೋಗಬೇಕು ಎಂದಿದ್ದಾರೆ.

ಮುಂದೆಯೂ ಸಾಮಾಜಿಕ ಅಂತರ, ಮಾಸ್ಕ್ ಪಾಲಿಸಬೇಕು
ಭಾರತಕ್ಕೆ 10 ವಾರಗಳ ಲಾಕ್‌ಡೌನ್ ಬೇಕು ಎಂದಿರುವ ರಿಚರ್ಡ್ ಹಾರ್ಟನ್ ಚೀನಾದ ಉದಾಹರಣೆ ನೀಡಿದ್ದಾರೆ. ಚೀನಾದಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ 10 ವಾರಗಳ ಲಾಕ್‌ಡೌನ್ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಲಾಕ್‌ಡೌನ್ ಮುಗಿದರೂ, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ ಎಂದಿದ್ದಾರೆ.

ಆರ್ಥಿಕತೆಗಾಗಿ ಲಾಕ್‌ಡೌನ್ ಸಡಿಲಿಕೆ ಮಾಡಬಾರದು
ಲಾಕ್‌ಡೌನ್ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುತ್ತದೆ. ಆದರೆ, ಯಾವುದೇ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೆ ಆರ್ಥಿಕತೆಯ ಸಲುವಾಗಿ ಲಾಕ್‌ಡೌನ್ ಸಡಿಲಿಕೆ ಮಾಡುವದು ಸರಿಯಲ್ಲ ಎಂದು ರಿಚರ್ಡ್ ಹಾರ್ಟನ್ ತಿಳಿಸಿದ್ದಾರೆ. ಆದರೆ ಅತ್ತ ಅಮೆರಿಕದಲ್ಲಿ ಆರ್ಥಿಕತೆ ಕಾರಣಗಳನ್ನು ನೀಡಿ ಅಧ್ಯಕ್ಷ ಟ್ರೆಂಪ್ ಮೂರು ಹಂತದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡುವುದಾಗಿ ತಿಳಿಸಿದ್ದಾರೆ.

ಭಾರತಕ್ಕೆ ಮುಂದುವರೆಯುತ್ತದೆಯೇ ಲಾಕ್‌ಡೌನ್?
ಎರಡನೇ ಹಂತದ ಲಾಕ್‌ಡೌನ್ ಭಾರತದಲ್ಲಿ ಮೇ 3ಕ್ಕೆ ಮುಗಿಯುತ್ತದೆ. ಆದರೆ, ಅಲ್ಲಿಗೆಯೇ ಲಾಕ್‌ಡೌನ್ ಅಂತ್ಯವಾಗುತ್ತದೆಯೇ..? ಎನ್ನುವ ಪ್ರಶ್ನೆ ಇದೆ. ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಾಕ್‌ಡೌನ್ ಮತ್ತೆ ಮುಂದುವರೆಯುತ್ತದೆ ಎನ್ನುವ ಅನುಮಾನವಿದೆ. ಸದ್ಯ, ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21393ಕ್ಕೆ ಏರಿಕೆಯಾಗಿದೆ. 681 ಮಂದಿ ಕೊರೊನಾದಿಂದ ಮರಣ ಹೊಂದಿದ್ದಾರೆ.












Click it and Unblock the Notifications