ಟಿಕೆಟ್ ಬಗ್ಗೆ ಗೊಂದಲವಿಲ್ಲ, ಬಿಎಸ್ ವೈ ನಿರ್ಧಾರ ಅಂತಿಮ:ಪ್ರತಾಪ್ ಸಿಂಹ
Recommended Video

ಮೈಸೂರು, ಮಾರ್ಚ್ 14: ಈ ಬಾರಿಯ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬೇರೆ ಪಕ್ಷಗಳಲ್ಲಿ ಸಿನಿಮಾ ಟಿಕೆಟ್ ಗೆ ಗೊಂದಲ ಇಲ್ಲ. ಆದರೆ ಚುನಾವಣೆ ಟಿಕೆಟ್ ಗೆ ಹೆಚ್ಚು ಗಲಾಟೆ- ಗೊಂದಲ ಇದ್ದಂತೆ ಕಾಣುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲ ಇಲ್ಲ. ನಮ್ಮಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರವೇ ಅಂತಿಮ. ಅವರು ಈಗಾಗಲೇ ಹಾಲಿ ಸಂಸದರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಅವರಿಗಿಂತ ದೊಡ್ಡವರು ಯಾರೂ ಇಲ್ಲ ಎಂದರು.
ಚುನಾವಣೆಗೆ ನಿಲ್ಲಬೇಕೆಂದು ಎಲ್ಲರಿಗೂ ಆಸೆ ಇರುತ್ತೆ, ಅದು ಸಹಜ ಬಿಡಿ. ಹಾಗಂತ ಎಲ್ಲರಿಗೂ ಟಿಕೆಟ್ ನೀಡಲು ಆಗಲ್ಲ. ಪಕ್ಷದ ವರಿಷ್ಠರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮ ಪಕ್ಷದಲ್ಲಿ ಈ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಫೇಸ್‌ಬುಕ್‌ನಲ್ಲಿ ರಾಜಕೀಯ ಪೋಸ್ಟ್ ಹಾಕಿದರೆ ಪೊಲೀಸರು ಮನೆಗೆ ಬರುತ್ತಾರೆ. ವಾಟ್ಸಪ್ ಅಡ್ಮಿನ್ ಗಳನ್ನು ಬಂಧಿಸುತ್ತಾರೆ ಎಂಬೆಲ್ಲಾ ವಿಚಾರಗಳು ಅಪಪ್ರಚಾರ ಆಗಿವೆ.
ಮಾಧ್ಯಮಗಳಲ್ಲಿ ಭಯ ಹುಟ್ಟಿಸುವ ರೀತಿಯ ಸುದ್ದಿಗಳು ವರದಿಯಾಗಿವೆ. ಆದ್ದರಿಂದ ನಮ್ಮ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದೆ. ಎಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ಉಲ್ಲೇಖಿಸಿಲ್ಲ ಎಂದು ತಿಳಿಸಿದರು.












Click it and Unblock the Notifications