ಮೋದಿಯನ್ನು ದ್ವೇಷಿಸುವ ಬದಲು ಅವರ ಕೆಲಸವನ್ನು ಪ್ರೀತಿಸಿ: ಭೈರಪ್ಪ
ಮೈಸೂರು, ಜೂನ್ 22: ಪ್ರಧಾನಿ ಮೋದಿ ಅವರು ನಾಲ್ಕು ವರ್ಷದಲ್ಲಿ ಭಾರತವನ್ನು ಉತ್ತಮವಾಗಿ ಅಭಿವೃದ್ಧಿ ಮಾಡಿದ್ದಾರೆ. ದೇಶ ಕಟ್ಟಲು ಸಾಕಷ್ಟು ಶ್ರಮಿಸಿದ್ದಾರೆ ಎಂದು ಸಾಹಿತಿ ಎಸ್ ಎಲ್.ಭೈರಪ್ಪ ಮೋದಿ ಅವರನ್ನು ಪ್ರಶಂಸಿಸಿದರು.
ಇಲ್ಲಿನ ಕುವೆಂಪು ನಗರದ ಅವರ ನಿವಾಸದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಹೊರತಂದಿರುವ ನಾಲ್ಕು ವರ್ಷದ ಕೇಂದ್ರದ ಯಶಸ್ವಿ ಯೋಜನೆಗಳ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಮೋದಿ ಅವರು ಒಂದು ಬಾರಿ ಮಾತ್ರವಲ್ಲ ಮೂರು ಬಾರಿ ಗೆಲ್ಲಬೇಕು. ಆಗ ಮಾತ್ರ ಭಾರತಕ್ಕೆ ಉಳಿಗಾಲ.
ಎರಡು ಮೂರು ಬಣಗಳು ಸೇರಿ ಮೋದಿ ಸೋಲಿಸಲು ಪಣ ತೊಟ್ಟಿವೆ. ಆದರೆ ಅವರನ್ನು ಸೋಲಿಸಿದರೆ ಅದು ನಮ್ಮ ಮೂರ್ಖತನದ ಪರಮಾವಧಿ.

ನಮ್ಮ ಶತೃ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನ ಹಾಗೂ ಸುತ್ತಮುತ್ತಲಿನ ರಾಷ್ಟ್ರಗಳ ಪ್ರೀತಿ-ವಿಶ್ವಾಸ ಗಳಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಅವರ ಒಂದೊಂದೇ ಸಾಧನೆಯನ್ನು ಬಿಚ್ಚಿಟ್ಟರು.
ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವ ಸಾಧನೆ ಮಾಡಿದ್ದಾರೆ. ಯಾವುದೇ ಒಂದು ಕೆಲಸ ಮಾಡಲು ಮೇಡಂ ಅಂತ ಅವರ ಹಿಂದೆ ಹೋಗ್ತಿದ್ರಿ. ನಿಮಗೆ ಇಂಥವರು ಬೇಕಾ ಅಥವಾ ದೇಶದ ಅಭಿವೃದ್ಧಿ ಮಾಡುವವರು ಬೇಕಾ ಎಂದು ಪ್ರಶ್ನಿಸಿದರು. ಮೋದಿ ಅವರನ್ನು ದ್ವೇಷ ಮಾಡುವ ಬದಲು ಅವರ ಕೆಲಸವನ್ನು ಪ್ರೀತಿಸಿ ಎಂದು ಭೈರಪ್ಪ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕೇಂದ್ರದಿಂದ ಮೈಸೂರು ಜಿಲ್ಲೆಗೆ ಆಗಿರುವ ಅಭಿವೃದ್ಧಿಯ ಬಗ್ಗೆ ಸಂಸದರು ಭೈರಪ್ಪ ಅವರ ಜೊತೆ ಕೂತು ವಿಶ್ಲೇಷಣೆ ನಡೆಸಿದರು.












Click it and Unblock the Notifications