ಸೆ.30ರಿಂದ ಸಂಭ್ರಮದ ಮಹಿಳಾ ಮತ್ತು ಮಕ್ಕಳ ದಸರಾ ಆರಂಭ
ಮೈಸೂರು, ಸೆಪ್ಟೆಂಬರ್ 21: ಮೈಸೂರು ದಸರಾ ಮಹೋತ್ಸವ-2019ರ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 4ರವರಗೆ ಮಹಿಳಾ ಮತ್ತು ಮಕ್ಕಳ ದಸರಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಪ್ರೇಮ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಸೆ.30ರಂದು ಮಹಿಳಾ ದಸರಾವನ್ನು ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ರಂಗೋಲಿ ಚಿತ್ತಾರ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವರಾದ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ ಉದ್ಘಾಟಿಸಲಿದ್ದಾರೆ. ಮಕ್ಕಳ ದಸರಾವು ಸೆ.30 ಮತ್ತು ಅ.1ರಂದು ಜಗನಮೋಹನ ಅರಮನೆಯಲ್ಲಿ ನಡೆಯಲಿದೆ" ಎಂದು ತಿಳಿಸಿದರು.
ಸೆ.30ರಂದು ಬೆಳಗ್ಗೆ 11 ಗಂಟೆಗೆ ಜೆ.ಕೆ.ಗ್ರೌಂಡ್ ನಲ್ಲಿ ಮಹಿಳಾ ದಸರಾಕ್ಕೆ ಉದ್ಯಮ ಸಂಭ್ರಮ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಾದ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಎಲ್. ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಮಕ್ಕಳ ದಸರಾವು ಸೆ.30 ರಿಂದ ಅ.2ರವರೆಗೆ ಜಗನ್ ಮೋಹನ ಅರಮನೆಯಲ್ಲಿ ನಡೆಯಲಿದೆ. ಸೆ.30ರಂದು ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದ ಪ್ರೌಢ ಶಾಲಾ ಮಕ್ಕಳಿಗೆ ಭಾರತದ ಚಂದ್ರಯಾನ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಆಶುಭಾಷಣ ಸ್ಪರ್ಧೆ, ವೇಷ ಭೂಷಣ ಸ್ಪರ್ಧೆ, ದಸರಾ ಕುರಿತು ಚಿತ್ರ ಕಲೆ, ಸಾಂಸ್ಕೃತಿಕ ನೃತ್ಯ ಸ್ಪರ್ಧೆ, ಮೈಸೂರು ದಸರಾ ಹಾಗೂ ಸಾಮಾನ್ಯ ಜ್ಞಾನ ಕುರಿತು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.
ಅ.1 ಮತ್ತು 2ರಂದು ವಿಜ್ಞಾನದ ಮತ್ತು ಕರಕುಶಲ ವಸ್ತು ಪ್ರದರ್ಶನದಲ್ಲಿ 50 ಮಕ್ಕಳು ಭಾಗವಹಿಸುವರು. ವಸ್ತು ಪ್ರದರ್ಶನದಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ಪುನರ್ ಬಳಕೆ ವಸ್ತುಗಳ ವಸ್ತು ಪ್ರದರ್ಶನ ನಡೆಯಲಿದೆ. ಗ್ರಾಮೀಣದಿಂದ ಮಕ್ಕಳ ದಸರಾಗೆ ಆಗಮಿಸುವ ಮಕ್ಕಳಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಉಪ ಸಮಿತಿಯ ಅಧ್ಯಕ್ಷೆ ವಿದ್ಯಾ ಅರಸ್, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ಪದ್ಮ, ಕಾರ್ಯದರ್ಶಿ ಪಾಂಡುರಂಗ, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.












Click it and Unblock the Notifications