ಮೈಸೂರು: ಚೆನ್ನಾಗಿದ್ದಾಳೆ ಎಂದು ಹಿಂದೆ ಬಿದ್ದವನಿಗೆ ಬಿತ್ತು ಪಂಗನಾಮ!
ಮೈಸೂರು, ಆಗಸ್ಟ್ 29 : ತನ್ನ ನಗುವಿನಿಂದಲೇ ವ್ಯಕ್ತಿಯೊಬ್ಬರನ್ನು ಸೆಳೆದು ಹಣಕ್ಕಾಗಿ ಪೀಡಿಸಿದ್ದ ಹನಿ ಟ್ರ್ಯಾಪ್ ಪ್ರಕರಣವೊಂದಕ್ಕೆ ಸೇರಿದಂತೆ ದಕ್ಷಿಣ ಗ್ರಾಮಾಂತರ ಪೊಲೀಸರು ಯುವತಿಯೊಬ್ಬಳನ್ನು ಬಂಧಿಸಿ ಇಂದು(ಆಗಸ್ಟ್ 29) ಜೈಲಿಗಟ್ಟಿದ್ದಾರೆ.
ನಗರದ ಅಶೋಕಪುರಂ ನಿವಾಸಿ ಮಾಲಾ(28) ಎಂಬಾಕೆಯೇ ಬಂಧಿತ ಆರೋಪಿ. ಆಕೆ ರಮಾಬಾಯಿನಗರದಲ್ಲಿ ಕೂಡ ಒಂದು ಮನೆಯನ್ನು ಹೊಂದಿದ್ದಾಳೆ. ತಿಂಗಳ ಹಿಂದೆ ನಗರದ ವಿವೇಕಾನಂದ ನಗರದಲ್ಲಿ ಜೆ.ಪಿ.ನಗರದ ನಿವಾಸಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರು ತೆರಳುತ್ತಿದ್ದಾಗ ರಸ್ತೆಯಲ್ಲಿ ನಿಂತಿದ್ದ ಮಾಲಾ, ಅವರನ್ನು ನೋಡಿ ಮುಗುಳ್ನಕ್ಕಿದ್ದಾಳೆ. ಉದ್ಯಮಿ ಆಕೆಯನ್ನು ಮಾತನಾಡಿಸಿದ್ದಲ್ಲದೆ, ಆಕೆಗೆ ತನ್ನ ದೂರವಾಣಿ ಸಂಖ್ಯೆಯನ್ನೂ ಕೊಟ್ಟು ಬಂದಿದ್ದಾರೆ. ನಂತರ ಆಕೆ ಆಗಾಗ್ಗೆ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡುತ್ತಿದ್ದಳು.

ಆ.15ರಂದು ಅವರನ್ನು ಸಂಪರ್ಕಿಸಿದ ಆಕೆ, ನಿಮ್ಮೊಂದಿಗೆ ಮಾತನಾಡಬೇಕು ಎಂದು ಹೇಳಿ ಅವರನ್ನು ರಮಾಬಾಯಿನಗರದ ಬಳಿಗೆ ಕರೆಸಿಕೊಂಡಿದ್ದಾಳೆ. ಮುಂದಾಗುವ ಘಟನೆಗಳ ಬಗ್ಗೆ ತಿಳಿಯದ ಅವರು, ಆಕೆ ಹೇಳಿದ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ಆಕೆಯನ್ನು ಭೇಟಿಯಾಗಿ ಮಾತನಾಡುತ್ತಿರುವಾಗಲೇ ಆಕೆಯ ಸ್ನೇಹಿತರೆಂದು ಹೇಳಿಕೊಂಡು ನಾಲ್ವರು ಯುವಕರು ಬಂದಿದ್ದಾರೆ.
ನಂತರ ಅಷ್ಟೂ ಮಂದಿ ಸೇರಿಕೊಂಡು ಅವರನ್ನು ಅಪಹರಿಸಿ ಗೊರೂರು ಬಳಿಗೆ ಕರೆದೊಯ್ದಿದ್ದಾರೆ. ನಂತರ ಅವರ ಮೇಲೆ ಹಲ್ಲೆ ನಡೆಸಿ, ಕೆಲ ಖಾಲಿ ಚೆಕ್ ಗಳಿಗೆ ಸಹಿ ಹಾಕಿಸಿಕೊಂಡು ಕಳುಹಿಸಿದ್ದಾರೆ. ಈ ಸಂಬಂಧ ಅವರು ದಕ್ಷಿಣ ಗಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಕೊಂಡ ಪೊಲೀಸರು, ಆಕೆಯ ಬಂಧನಕ್ಕೆ ತಂಡವನ್ನು ರಚಿಸಿದ್ದರು. ಆಕೆ ಭಾನುವಾರ ಬೆಂಗಳೂರಿಗೆ ತೆರಳುವ ಸಿದ್ಧತೆಯಲ್ಲಿದ್ದ ವೇಳೆ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ಕಾರ್ಯಾಚಾರಣೆಯಲ್ಲಿ ಈಕೆಯ ಸ್ನೇಹಿತರೂ ಸಿಕ್ಕಿಬಿದ್ದಿದ್ದಾರೆ.
ಈಕೆ ಎಂಟಕ್ಕೂ ಅಧಿಕ ಉದ್ಯಮಗಳಿಗೆ ಹನಿಟ್ರ್ಯಾಪ್ ದಂಧೆಯ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎನ್ನಲಾಗಿದೆ. ಮಾನಕ್ಕೆ ಅಂಜಿ ಕೆಲವರು ದೂರು ಕೊಡಲು ಹಿಂದೇಟು ಹಾಕಿದ್ದಾರೆ . ಗ್ರಾಮಾಂತರ ಠಾಣಾ ಪೊಲೀಸರು ಮಾಯಾಂಗನೆಯನ್ನು ವಿಚಾರಣೆ ನಡೆಸುತ್ತಿದ್ದಾರೆ.











Click it and Unblock the Notifications