ಮಗುವಿಗೆ ಹೊಡೆಯಬೇಡ ಎಂದದ್ದಕ್ಕೆ ಹೆಂಡತಿ ಹೀಗೇಕೆ ಮಾಡಿಕೊಂಡಳು
ಮೈಸೂರು, ಜನವರಿ 16: ಮಗುವಿಗೆ ಹೊಡೆಯಬೇಡ ಎಂದು ಪತಿ ಬುದ್ಧಿವಾದ ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡ ಪತ್ನಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಕುಂದಾಪುರ ಮೂಲದವರಾದ ವಿನುತಾ 11 ವರ್ಷಗಳ ಹಿಂದೆ ಜ್ಯೂಸ್ ಅಂಗಡಿ ಇಟ್ಟಿದ್ದ ನಾಗರಾಜ್ ಎಂಬುವವರ ಜೊತೆ ಮದುವೆಯಾಗಿದ್ದರು. ಶ್ರೀರಾಂಪುರ ಎರಡನೇ ಹಂತದಲ್ಲಿ ಮನೆ ಮಾಡಿಕೊಂಡು ಸಂತೋಷವಾಗೇ ಜೀವನ ಸಾಗಿಸುತಿದ್ದರು ಎಂದು ಹೇಳುತ್ತಾರೆ ನೆರೆಹೊರೆಯವರು.
ಆದರೆ ಮಂಗಳವಾರ ವಿನುತಾ ತನ್ನ ನಾಲ್ಕು ವರ್ಷದ ಮಗುವಿಗೆ ಹೊಡೆಯುತ್ತಿದ್ದಳು. ಇದನ್ನು ನೋಡಿದ ನಾಗರಾಜ್, ಮಗುವಿಗೆ ಹೊಡೆಯಬೇಡ ಎಂದು ಆಕೆಗೆ ಬುದ್ಧಿ ಹೇಳಿದ್ದಾರೆ. ನಂತರ ಹೊಡೆಯುವುದನ್ನು ನಿಲ್ಲಿಸಿದ್ದಾರೆ. ನಂತರ ನಾಗರಾಜ್ ಉತ್ತನಹಳ್ಳಿ ದೇವಸ್ಥಾನಕ್ಕೆ ಹೋಗಿದ್ದಾರೆ.

ದೇವಸ್ಥಾನಕ್ಕೆ ಹೋಗಿ ವಾಪಸ್ ಬಂದ ನಾಗರಾಜ್ ಮನೆಗೆ ಬಂದಾಗ, ವಿನುತಾ ಫ್ಯಾನಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿರುವುದು ಕಂಡಿದೆ. ವಿನುತಾ ತನ್ನ ಪತಿಯ ಮಾತಿಗೆ ಮನನೊಂದು ಆತ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications