ವರುಣದಲ್ಲಿ ಸಿದ್ದರಾಮಯ್ಯ ಗೆಲುವು ಸುಲಭ; 5 ಕಾರಣಗಳು
ಮೈಸೂರು, ಮೇ 04; ಮೈಸೂರು ಜಿಲ್ಲೆಯ ವರುಣ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರ. ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯಿಂದ ವಿ. ಸೋಮಣ್ಣ ಅಭ್ಯರ್ಥಿಗಳು. ಜೆಡಿಎಸ್ ಸೇರಿದಂತೆ ಬೇರೆ ಪಕ್ಷಗಳು ಕಣದಲ್ಲಿದ್ದರೂ ಸಹ ನೇರ ಪೈಪೋಟಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ.
ವರುಣದಲ್ಲಿ ಬಿಜೆಪಿಯಿಂದ ವಿ. ಸೋಮಣ್ಣ ಅಲ್ಲದೇ ಬೇರೆ ಯಾರೇ ಅಭ್ಯರ್ಥಿಯಾಗಿದ್ದರೂ ಸಿದ್ದರಾಮಯ್ಯ ಗೆಲುವು ಸುಲಭ ಎಂಬ ಮಾತಿತ್ತು. ಆದರೆ ಈಗಲೂ ಸಹ ಸಿದ್ದರಾಮಯ್ಯರನ್ನು ಸೋಲಿಸುವುದು ಅಷ್ಟು ಸುಲಭವಾಗಿಲ್ಲ ಎಂಬುದು ಬಿಜೆಪಿಗೂ ತಿಳಿದಿದೆ. ಆದ್ದರಿಂದ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಸೋಮಣ್ಣರನ್ನು ವರುಣಕ್ಕೆ ತಂದು ನಿಲ್ಲಿಸಿದೆ.

ಕ್ಷೇತ್ರದಲ್ಲಿ ಜೆಡಿಎಸ್ ಸೇರಿದಂತೆ ಇತರ ಪಕ್ಷಗಳಿಗೆ ಭದ್ರವಾದ ನೆಲೆ ಇಲ್ಲ. ಆದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ. ಪಕ್ಷವನ್ನೂ ಮೀರಿ ವರುಣ ಕ್ಷೇತ್ರ ಸಿದ್ದರಾಮಯ್ಯ ಭದ್ರಕೋಟೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ಯಾರಿಗೆ ಗೆಲುವು?. ಯಾರು ಎಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ? ಎಂಬ ಲೆಕ್ಕಾಚಾರ ನಡೆಯುತ್ತಿದೆ.
ಸಿದ್ದರಾಮಯ್ಯ ಗೆಲುವು ಸುಲಭ ಏಕೆ?;
ಕಾರಣ 1; ಮೂರು ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು; ವರುಣ ಕ್ಷೇತ್ರ ಎದುರಿಸಿರುವುದು ಮೂರು ಚುನಾವಣೆ. 2008ರಲ್ಲಿ ಸಿದ್ದರಾಮಯ್ಯ 71,908 ಮತಗಳನ್ನು ಪಡೆದು ಜಯಗಳಿಸಿದ್ದರು ಮತ್ತು 2013ರಲ್ಲಿ 84,385 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ 58 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಭಾವ ಎಷ್ಟಿದೆ? ಎಂದು ಅಂದಾಜಿಸಬಹುದಾಗಿದೆ.

ಕಾರಣ 2; ಸಿದ್ದರಾಮಯ್ಯ ಭದ್ರಕೋಟೆ; ವರುಣ ಕ್ಷೇತ್ರ ಸಿದ್ದರಾಮಯ್ಯ ಭದ್ರಕೋಟೆ ಎಂದರು ತಪ್ಪಿಲ್ಲ. ಅವರ ಹುಟ್ಟೂರು ಸಿದ್ದರಾಮನಹುಂಡಿ ಸಹ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇಲ್ಲಿನ ಬಹುಪಾಲು ಮತದಾರರು ಅವರ ಅಭಿಮಾನಿಗಳು. ಪಕ್ಷವನ್ನೂ ಮೀರಿದ ವರ್ಚಸ್ಸನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಅದೇ ನಂಬಿಕೆಯ ಮೇಲೆ ಅವರು ಈ ಬಾರಿ ವರುಣದಲ್ಲಿ ಮಾತ್ರ ಕಣಕ್ಕಿಳಿದಿದ್ದಾರೆ.
ಕಾರಣ 3; ಮುಖ್ಯಮಂತ್ರಿಯಾಗುವರು; ವರುಣದಲ್ಲಿ ಮೊದಲು ಗೆದ್ದ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾದರು. 2ನೇ ಬಾರಿಗೆ ಗೆದ್ದ ಬಳಿಕ ಮುಖ್ಯಮಂತ್ರಿಯಾದರು. ಈ ಬಾರಿ ಅವರು ಗೆದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ನಿರೀಕ್ಷೆ ಇದೆ. ಆದ್ದರಿಂದ ಸಿದ್ದರಾಮಯ್ಯ ಪರವಾಗಿ ಜನರು ಬೆಂಬಲ ನೀಡಬಹುದು ಎಂದು ಅಂದಾಜಿಸಲಾಗಿದೆ.
ಕಾರಣ 4; ಜಾತಿ ಅಸ್ತ್ರ ಮೀರಿದ ನಾಯಕ; ವರುಣದಲ್ಲಿ ಲಿಂಗಾಯತ ಮತಗಳು ಅಧಿಕವಾಗಿವೆ. ಆದ್ದರಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಇಲ್ಲಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಅವರು ಶಿಕಾರಿಪುರದ ಅಭ್ಯರ್ಥಿಯಾಗಿದ್ದು, ವಿ. ಸೋಮಣ್ಣರನ್ನು ನಿಲ್ಲಿಸಲಾಗಿದೆ. ವೀರಶೈವ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟು ಜಾತಿ ದಾಳ ಉರುಳಿಸಲಾಗಿದೆ. ಆದರೆ ಸಿದ್ದರಾಮಯ್ಯ ಜಾತಿ ಅಸ್ತ್ರವನ್ನೂ ಮೀರಿದ ನಾಯಕರು. ಆದ್ದರಿಂದ ಅವರ ಗೆಲುವು ಸುಲಭ ಎಂಬ ಮಾತಿದೆ.
ಕಾರಣ 5; ಎದುರಾಳಿಗಳು ಪ್ರಬಲರಾಗಿಲ್ಲ;. ವರುಣದಲ್ಲಿ ಸಿದ್ದರಾಮಯ್ಯ ಎದುರಾಳಿಗಳು ಪ್ರಬಲವಾಗಿಲ್ಲ. ಬಿಜೆಪಿ ಅಭ್ಯರ್ಥಿ ಸೋಮಣ್ಣ ಸ್ಥಳೀಯರು ಅಲ್ಲ. ಲಿಂಗಾಯತರು ಎಂಬ ಒಂದೇ ಕಾರಣಕ್ಕೆ ವರುಣಕ್ಕೆ ಬಂದು ನಿಂತಿದ್ದಾರೆ. ಜೆಡಿಎಸ್‌ನ ಡಾ. ಭಾರತಿ ಶಂಕರ್ ಸಹ ಪ್ರಬಲರಲ್ಲ. ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಭಾವ ಸಹ ಇಲ್ಲ. ಆದ್ದರಿಂದ ಸಿದ್ದರಾಮಯ್ಯ ಗೆಲುವು ಸುಲಭ ಎಂಬುದು ಲೆಕ್ಕಾಚಾರವಾಗಿದೆ.












Click it and Unblock the Notifications