ಪ್ರತಾಪ್‌ಸಿಂಹಗೂ ಮನೋರಂಜನ್‌ಗೂ ಏನು ಸಂಬಂಧ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನೆ
ಮೈಸೂರು, ಡಿಸೆಂಬರ್ 27: ಸಂಸದ ಪ್ರತಾಪಸಿಂಹ ಅವರಿಗೆ ಚಾಮುಂಡೇಶ್ವರಿ ಮೇಲೆ ಭಕ್ತಿ ಇದ್ದರೆ ಕೇಂದ್ರದ ವೀಕ್ಷಕರು ಮಾಡಿರುವ ವರದಿಯಲ್ಲಿ ಏನಿದೆ ? ಮನೋರಂಜನ್‌ಗೂ ನಿಮಗೂ ಸಂಪರ್ಕ ಇಲ್ಲವೇ, ಪ್ರಕರಣದಲ್ಲಿ ನಿಮ್ಮ ಪಾತ್ರ ಇಲ್ಲವೇ ಎಂಬುದನ್ನು ಬಹಿರಂಗಪಡಿಸಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಭದ್ರತಾ ವೈಲ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಂಸದ ಪ್ರತಾಪ್‌ಸಿಂಹ ಹಾಗೂ ಮನೋರಂಜನ್‌ಗೂ ಏನು ಸಂಬಂಧ ? ಒಟ್ಟು ಪ್ರಕರಣದಲ್ಲಿ ಅವರ ಪಾತ್ರವೇನು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನಿಸಿದರು.

ಸಂಸದ ಪ್ರತಾಪ್‌ಸಿಂಹ ಅವರು ಲೋಕಸಭೆ ಭದ್ರತೆ ವಿಚಾರವಾಗಿ ಕೇಳಿದರೆ ತಾಯಿ ಚಾಮುಂಡೇಶ್ವರಿ ಎಲ್ಲ ನೋಡಿಕೊಳ್ಳುತ್ತಾಳೆ. ನಾನು ದೇಶ ಭಕ್ತನೋ ಇಲ್ಲವೋ ಎಂದು ಜನರು ಚುನಾವಣೆಯಲ್ಲಿ ನಿರ್ಧರಿಸುತ್ತಾರೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇವರಿಗೆ ಚಾಮುಂಡೇಶ್ವರಿ ಮೇಲೆ ಭಕ್ತಿ ಇದ್ದರೆ ಕೇಂದ್ರದ ವೀಕ್ಷಕರು ಮಾಡಿರುವ ವರದಿಯಲ್ಲಿ ಏನಿದೆ ? ಮನೋರಂಜನ್‌ಗೂ ನಿಮಗೂ ಸಂಪರ್ಕ ಇಲ್ಲವೇ? ಪ್ರಕರಣದಲ್ಲಿ ನಿಮ್ಮ ಪಾತ್ರ ಇಲ್ಲವೇ ಎಂಬುದನ್ನು ಬಹಿರಂಗಪಡಿಸಿ ಎಂದು ವಾಗ್ದಾಳಿ ನಡೆಸಿದರು.
ಯಾತ್ರೆಗೆ ಅನುಮತಿ ಸರಿಯಲ್ಲ: ಶ್ರೀರಂಗಪಟ್ಟಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ನಡೆಸಿದ ಹನುಮ ಜಯಂತಿ ನಿಮಿತ್ತ ಏರ್ಪಡಿಸಿದ್ದ ಸಂಕೀರ್ತನಾ ಯಾತ್ರೆ ನಿಗದಿತ ಮಾರ್ಗ ಬಿಟ್ಟು ಹೋಗುವುದಕ್ಕೆ ಅನುಮತಿ ನೀಡಿದ ಮಂಡ್ಯ ಜಿಲ್ಲಾಡಳಿತದ ವಿರುದ್ಧ ಕ್ರಮ ಜರುಗಿಸಬೇಕು. ಯಾತ್ರೆ ಹೆಸರಿನಲ್ಲಿ ಮಸೀದಿಯ ಒಳ ನುಗ್ಗುವ ಮತ್ತು ಗಲಭೆ ಸೃಷ್ಟಿಸುವ ಪ್ರಯತ್ನಗಳು ನಡೆದಿವೆ. ಇದಕ್ಕೆ ಅವಕಾಶ ಕೊಟ್ಟವರು ಯಾರು? ಸಾವಿರಾರು ಪೊಲೀಸರು ಇದ್ದರು ಇಂತಹ ಘಟನೆಗಳು ನಡೆಯಲು ಹೇಗೆ ಸಾಧ್ಯ? ಈ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಯಿಂದ ಸರಕಾರ ಸ್ಪಷ್ಟನೆ ಪಡೆದು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕವಲಂದೆ ಪೊಲೀಸ್ ಠಾಣೆ ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಹಿಜಾಬ್ ನಿಷೇಧ ವಾಪಸ್ ಬಗ್ಗೆ ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಹಿಜಾಬ್ ನಿಷೇದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ಸಕಾರಾತ್ಮಕವಾಗಿ ತೀರ್ಪು ಬಂದಲ್ಲಿ ನೂರಕ್ಕೆ ನೂರಷ್ಟು ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ ಇನ್ನಿತರರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.












Click it and Unblock the Notifications