ಮೈಸೂರು ಚಾಮುಂಡಿ ಬೆಟ್ಟಕ್ಕೆ ರೋಪ್ ವೇ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?
ಮೈಸೂರು, ಡಿಸೆಂಬರ್, 24: ತುಂಬಾ ದಿನಗಳಿಂದ ಮೈಸೂರು ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಬೇಕು ಎನ್ನುವ ಕೂಗುಗಳು ಎದ್ದಿದ್ದವು, ಮತ್ತೊಂದೆಡೆ ಇದಕ್ಕೆ ವಿರೋಧಗಳು ಕೂಡ ವ್ಯಕ್ತವಾಗಿದ್ದವು. ಆದರೆ ಇದೀಗ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಪರಿಸರವಾದಿಗಳು ಸೇರಿದಂತೆ ಯಾರೂ ಅಡ್ಡಿಪಡಿಸಬಾರರು ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಳಿಕೊಂಡಿದ್ದಾರೆ.
ಇಲ್ಲಿನ ವಿಜಯನಗರದ ಬಂಟರ ಭವನದಲ್ಲಿ ಶನಿವಾರ (ಡಿಸೆಂಬರ್ 23) ನಡೆದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಹೋಟೆಲ್ ಮಾಲೀಕರ ಸಂಘದವರ ಮನವಿಗೆ ಅವರು ಮಾತನಾಡಿದರು. ಹಿಂದೆಯೇ ರೋಪ್ ವೇ ಮಾಡಲು ಮುಂದಾಗಿದ್ದೆವು. ಆದರೆ ಪರಿಸರವಾದಿಗಳು ಅಡ್ಡಪಡಿಸಿದರು. ನೀವು ಅವರಿಗೆ ಹೇಳಬೇಕೆಂದು ಹೋಟೆಲ್ ಮಾಲೀಕರ ಸಂಘದವರಿಗೆ ತಿಳಿಸಿದರು. ಚಿತ್ರನಗರಿಯನ್ನು ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾಗುವುದು. ಸ್ಥಳಾಂತರಿಸುವುದಿಲ್ಲ, ಬಜೆಟ್‌ನಲ್ಲೂ ಹೇಳಿದ್ದೇನೆ ಎಂದರು.

ನಾನು ನಗರದಲ್ಲಿ ವಿದ್ಯಾಭ್ಯಾಸ ಮಾಡುವುವಾಗ ಹೋಟೆಲ್‌ಗಳಲ್ಲೇ ಊಟ, ಉಪಹಾರ ಮಾಡುತ್ತಿದ್ದೆ. ಚೆನ್ನಾಗಿರುವರಲ್ಲಿಗೆ ಹುಡುಕಿಕೊಂಡು ಹೋಗುತ್ತಿದ್ದೆ. ರಾತ್ರಿ ಮಾಂಸಹಾರಿ ಹೋಟೆಲ್ ಹುಡುಕುತ್ತಿದ್ದೆ ಎಂದು ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕಿದರು. ತಿಂಗಳ ಕೊನೆಯಲ್ಲಿ ಅಥವಾ ಇಲ್ಲದಿದ್ದಾಗ ರೂಂ ಬಿಟ್ಟು ಹೊರ ಬರುತ್ತಲೇ ಇರಲಿಲ್ಲ ಎಂದರು.
ಮೈಸೂರು ಪ್ರವಾಸಿ ತಾಣವಾದ್ದರಿಂದ ಇಲ್ಲಿಗೆ ಬರುವವರ ಅತಿಥ್ಯ ಬಹಳ ಮುಖ್ಯವಾಗಿದೆ. ಈ ಕೆಲಸವನ್ನು ಹೋಟೆಲ್ ಉದ್ಯಮದವರು ಮಡುತ್ತಿದ್ದೀರಿ. ಅದು ಕೂಡ ದೊಡ್ಡ ಸಮಾಜಸೇವೆಯಾಗಿದೆ. ನಮ್ಮ ಯೋಜನೆಗಳ ಮೂಲಕ ಜನರ ಕೈಯಲ್ಲಿ ಹಣ ಓಡಾಡುವಂತೆ ಮಾಡಿದ್ದೇವೆ. ಇದರಿಂದ ಹೋಟೆಲ್ ಸೇರಿದಂತೆ ಎಲ್ಲ ಉದ್ಯಮಗಳಿಗೂ ಅನುಕೂಲ ಆಗಿದೆ ಎಂದು ಹೇಳಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಬೇಡಿಕೆಗಳನ್ನು ಮಂಡಿಸಿದರು. ಮೈಸೂರು ಭಾಗದಲ್ಲಿ ಅತಾರಾಷ್ಟ್ರೀಯ ಮಟ್ಟದ ಡಿಸ್ನಿಲ್ಯಾಂಡ್ ಸ್ಥಾಪಿಸಬೇಕು. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಬೇಕು. ಇಮ್ಮಾವಿನಲ್ಲೇ ಚಿತ್ರನಗರಿಯನ್ನು ತ್ವರಿತವಾಗಿ ಸ್ಥಾಪಿಸಬೇಕು. ಹೋಟೆಲ್ ಕೆಲಸಕ್ಕೆಂದು ಹಳ್ಳಗಳಿಂದ ಬರುವವರಿಗೆ ತರಬೇತಿ ನೀಡಲು ಸರ್ಕಾರದಿಂದ ಕೇಂದ್ರ ಪ್ರಾರಂಭಿಸಬೇಕು ಎಂದರು.
ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕನ್ವೆನ್ಷನ್ ಹಾಲ್ ನಿರ್ಮಾಣ ಮಾಡಬೇಕು. ಉದ್ದಿಮೆ ಪರವಾನಗಿ ಹಾಗೂ ನವೀಕರಣಕ್ಕಿರುವ ನಿಯಮಗಳನ್ನು ಸರಳೀಕರಿಸಬೇಕು. ಮೈಸೂರಿನಲ್ಲಿ ದಿನದ 24 ಗಂಟೆಯೂ ಹೋಟೆಲ್ ಉದ್ಯಮಕ್ಕೆ ಅವಕಾಶ ಕೊಡಬೇಕು. ಬಾರ್ ಅಂಡ್ ರೆಸ್ಟೋರೆಂಟ್ ಅವಧಿಯನ್ನು ಒಂದು ಗಂಟೆ ವಿಸ್ತರಿಸಬೇಕು. ದಸರಾ ಅಭಿವೃದ್ಧಿ ಪ್ರಧಿಕಾರ ರಚಿಸಬೇಕು ಎಂದು ಒತ್ತಾಯ ಮಾಡಿದರು.
ರಾಜ್ಯ ಹೋಟೆಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಜಿ.ಕೆ.ಶೇಟ್ಟಿ ಮಾತನಾಡಿ, 20ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಿರುವ ಹೋಟೆಲ್‌ಗಳಿಗೆ ಕೈಗಾರಿಕೆಯ ಸ್ಥಾನಮಾನ ನೀಡಬೇಕು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದನ್ನು ಹೇಳಲಾಗಿತ್ತು. ಹೋಟೆಲ್ ಉದ್ಯಮ ಮಾಡಲು ವಿವಿಧ 16 ಪರವಾನಗಿ ಪಡೆಯಬೇಕು. ಇದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಮಾಡಬೇಕು. ಪರವಾನಗಿ ಒಮ್ಮೆ ಪಡೆದರೆ ಸಾಕು ಎಂಬ ನಿಯಮ ಜಾರಿಗೊಳಿಸಬೇಕು ಎಂದರು.
ಸಂಘದ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಸಾಧನೆಗಾಗಿ ಪ್ರತಿಭಾ ಪುರಸ್ಕಾರ ನೀಡಲಾಯಿತು. 50 ವರ್ಷಗಳಿಂದ ಒಂದೇ ಕಡೆ ಹೋಟೆಲ್ ಉದ್ಯಮ ನಡೆಸುತ್ತಿರುವವರನ್ನು ಸನ್ಮಾನ ಮಾಡಲಾಯಿತು. ಹಾಗೂ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.












Click it and Unblock the Notifications