40 ವರ್ಷ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಸಾಧನೆ ಮೆಲುಕು ಹಾಕಿದ್ರೆ ತಪ್ಪೇನು?: ಡಿಕೆಶಿ ಪ್ರಶ್ನೆ
ಮೈಸೂರು, ಜುಲೈ 19: "ಸಿದ್ದರಾಮಯ್ಯ 40 ವರ್ಷ ರಾಜಕಾರಣ ಮಾಡಿದ್ದಾರೆ. ಅನೇಕ ಜನಪರ ಕಾರ್ಯಕ್ರಮ ಕೊಟ್ಟಿದ್ದಾರೆ. ಅವರ ಸಾಧನೆ ಮೆಲುಕು ಹಾಕುವುದು ತಪ್ಪೆ? ಪುಸ್ತಕ ಬಿಡುಗಡೆ ಮಾಡಿ ಭಾವನೆ ಹಂಚಿಕೊಳ್ಳಬಾರದೇ" ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ನಗರದ ಪತ್ರಕರ್ತರ ಸಂಘದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಮನುಷ್ಯನ ಬದುಕಿನಲ್ಲಿ ನಾನಾ ಮೈಲಿಗಲ್ಲು ಇರುತ್ತದೆ. ನಾಮಕರಣ, ಉಪನಯನ, ಹುಟ್ಟುಹಬ್ಬ, ವಿವಾಹ ನಡೆದುಕೊಂಡು ಬಂದಿದೆ. ಸಿದ್ದರಾಮಯ್ಯ ಅವರ ಅಭಿಮಾನಿಗಳು, ಹಿತೈಷಿಗಳು 75ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ನಾನು ಪಾಲ್ಗೊಳ್ಳಲಿದ್ದೇನೆ. ಈ ಸಮಾವೇಶದಿಂದ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸರಕಾರ ಸಾಧನಾ ಸಮಾವೇಶ ಆಚರಿಸುತ್ತಿರುವುದಕ್ಕೆ ಆಕ್ರೊಶ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್, "ರಾಜ್ಯದ ಬಿಜೆಪಿ ಸರಕಾರ ದಪ್ಪ ಚರ್ಮದ ಅತೀ ಭ್ರಷ್ಟ ಸರಕಾರವಾಗಿದೆ. ಸಮಾವೇಶದಲ್ಲಿ ಶೇ. 40 ಕಮಿಷನ್ ತೆಗೆದುಕೊಳ್ಳುತ್ತೇವೆ, ಪಿಎಸ್‌ಐ ಹಗರಣದರಲ್ಲಿ ಯುವಕರನ್ನು ಬೀದಿಗೆ ತಳ್ಳಿದ್ದೇವೆ. ಕೊರೊನಾ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದು ಸಮಾವೇಶದಲ್ಲಿ ಹೇಳಿಕೊಳ್ಳಲಿ. ಅದೇ ಅವರ ಸಾಧನೆ," ಎಂದು ವ್ಯಂಗ್ಯವಾಡಿದ್ದಾರೆ.

ಕರ್ನಾಟಕಕ್ಕೆ ಕೆಟ್ಟ ಹೆಸರು ತಂದ ಪಿಎಸ್‌ಐ ಅಕ್ರಮ
ಸಿದ್ದರಾಮಯ್ಯ ಅವರ ಸರಕಾರದಲ್ಲಿ 169 ಪ್ರಣಾಳಿಕೆಯಲ್ಲಿ 164 ಈಡೇರಿಸಿದ್ದೇವೆ. ಬಿಜೆಪಿಯವರು ಪ್ರಣಾಳಿಕೆಯಲ್ಲಿ ಘೊಷಿಸಿದ್ದ ಯಾವುದನ್ನು ಈಡೇರಿಸಿದ್ದಾರೆ. ಬಹಿರಂಗಪಡಿಸಲಿ. ಬಿಜೆಪಿ ಸರಕಾರದಿಂದ ದೇಶದಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ಒಎಂಆರ್ ಶೀಟ್ ತಿದ್ದಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿರುವುದು ಪ್ರಪಂಚದಲ್ಲಿ ಎಲ್ಲೂ ನಡೆದಿಲ್ಲ. ಎಂಎಲ್‌ಸಿ ವಿಶ್ವನಾಥ್ ತಮ್ಮ ಸರ್ಕಾರದಲ್ಲಿ ಶೇ. 20 ಕಮಿಷನ್ ಇದೆ ಎಂದು ಹೇಳಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ, ಸಚಿವರಿಗೆ ಇಂತಿಷ್ಟು ಹಣ ನಿಗಧಿ ಮಾಡಲಾಗಿದೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಇವರನ್ನು ಏಕೆ ಪ್ರಶ್ನಿಸಲಿಲ್ಲ. ಇವರ ಲೋಪಗಳನ್ನು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆಗೆ ನೋಟೀಸ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷಕ್ಕೆ ಸಹಕರಿಸಲು ಜನತೆಗೆ ಮನವಿ
ಕುವೆಂಪು, ಕನಕದಾಸ, ಬಸವಣ್ಣ, ಸಂತ ಶಿಶುನಾಳ ಶರೀಫರ ಕರ್ನಾಟಕ ಉಳಿಯಬೇಕು. ಶಾಂತಿಗೆ ಭಂಗ ತರುತ್ತಿರುವುದು ನಿಲ್ಲಬೇಕು. ನಿರುದ್ಯೊಗಿ ಯುವಕರ ಸರ್ವೇ ನಡೆಯುತ್ತಿದೆ. ಯುವಕರಿಗೆ ಉದ್ಯೊಗ ಕೊಡುವ ದಿಸೆಯಲ್ಲಿ ಅಭಿಯಾನ ಪ್ರಾರಂಭಿಸಿದ್ದೇವೆ. ಆಗಸ್ಟ್ 15ರಂದು 75ನೇ ಅಮೃತ ಮಹೋತ್ಸವದ ಭಾಗವಾಗಿ ಲಕ್ಷ ಜನರು ರಾಷ್ಟ್ರಧ್ವಜ ಹಿಡಿದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜು ಮೈದಾನ ಸೇರಲಿದ್ದೇವೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ರಾಜ್ಯದ ಹಿತ ಕಾಪಾಡಲು ಉತ್ತಮ ಆಡಳಿತ ನೀಡಲು ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ಕೊಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು

ಕಾಂಗ್ರೆಸ್‌ನಲ್ಲಿ ಎಲ್ಲಾ ಸಮುದಾಯದವರು ಸಿಎಂ ಆಗಿದ್ದಾರೆ
ದಲಿತ ಮುಖ್ಯಮಂತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್‌ನಲ್ಲಿ ಡಿ.ದೇವರಾಜ ಅರಸು, ವೀರಪ್ಪಮೊಯ್ಲಿ, ಬಂಗಾರಪ್ಪ, ಗುಂಡೂರಾವ್, ಧರ್ಮಸಿಂಗ್ ಸೇರಿದಂತೆ ಬಹುತೇಕ ಎಲ್ಲಾ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಿರುವಾಗ ದಲಿತರು ಯಾಕಾಗಬಾರದು? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ಗೆ 136 ಸ್ಥಾನ ಖಚಿತ
2023ರ ರಾಜ್ಯ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ. ಕೆಪಿಸಿಸಿಯಿಂದ ನಡೆಸಿರುವ ಸಮೀಕ್ಷೆಯಲ್ಲಿ 2023ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರಲಿದೆ. ನಮ್ಮ ಸ್ವಂತ ಬಲದ ಅಧಿಕಾರಕ್ಕೆ ಬರುವುದಾಗಿ ವರದಿ ಬಂದಿದೆ. 136 ಸ್ಥಾನ ಪಡೆಯಲಿದ್ದೇವೆ. ಯಾವಾಗ ಚುನಾವಣೆ ನಡೆದರೂ ಎದುರಿಸಲು ಸಿದ್ಧರಿದ್ದೇವೆ. ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವುದರೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ನಗರ ಉಪಾಧ್ಯಕ್ಷ ಬಸವಣ್ಣ ಇದ್ದರು.












Click it and Unblock the Notifications