ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತ
ಮೈಸೂರು, ಆಗಸ್ಟ್ 31 : ಕೆಆರ್ ಎಸ್ ಜಲಾಶಯ ಸೇರಿದಂತೆ ಕಾವೇರಿ ಜಲಾನಯನ ಭಾಗದ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಕೊಡಗು, ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಜಲಾಶಯಗಳ ಒಳ ಹರಿವು ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಮೈಸೂರು ಜಿಲ್ಲೆಯ ಜೀವನಾಡಿ ಕೆಆರ್ ಎಸ್ ಜಲಾಶಯಕ್ಕೆ ಮೂವತ್ತು ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಇದೇ ಪ್ರಮಾಣದಲ್ಲಿ ಒಳಹರಿವು ಮುಂದುವರಿದರೆ ಎರಡು ದಿನದಲ್ಲಿ ನೀರಿನ ಮಟ್ಟ ನೂರು ಅಡಿ ತಲುಪಲಿದೆ. 124.80 ಅಡಿ ಸಾಮರ್ಥ್ಯವಿರುವ ಜಲಾಶಯದಲ್ಲಿ ಬುಧವಾರ ಸಂಜೆ ವೇಳೆಗೆ 97 ಅಡಿ ನೀರು ಸಂಗ್ರಹವಾಗಿದೆ.

ಕಳೆದ ವರ್ಷ ಇದೇ ದಿನ 92.47 ಅಡಿ ನೀರು ಸಂಗ್ರಹವಾಗಿತ್ತು ಮತ್ತು 7377 ಕ್ಯೂಸೆಕ್ ನೀರು ಮಾತ್ರ ಜಲಾಶಯಕ್ಕೆ ಹರಿದು ಬರುತ್ತಿತ್ತು . ಆದರೆ ಈ ವರ್ಷ ಇದೇ ಮೊದಲ ಬಾರಿಗೆ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಸದ್ಯದಲ್ಲಿಯೇ ಮೂರಂಕಿಯನ್ನು ಮುಟ್ಟುವುದರಿಂದ ರೈತರಲ್ಲಿ ಸಂತಸ ಮೂಡಿದೆ.
ಕಾವೇರಿ ಜಲಾನಯನ ಪ್ರದೇಶವಾದ ಕೊಡಗಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಎರಡು ದಿನದಲ್ಲಿ ನೀರಿನ ಮಟ್ಟ ನೂರಡಿ ದಾಟುವುದು ನಿಶ್ಚಿತ ಎಂದು ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಇಂಜಿನಿಯರ್ ಬಸವರಾಜೇಗೌಡ ತಿಳಿಸಿದ್ದಾರೆ.

ಪ್ರಸ್ತುತ ಜಲಾಶಯದಲ್ಲಿ 11.75 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ನಾಲೆಗಳಿಗೆ ನೀರು ಹರಿಸುವುದನ್ನು ಬುಧವಾರ ಮುಂಜಾನೆಯಿಂದ ನಿಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ಸೆಪ್ಟೆಂಬರ್ 15ಕ್ಕೆ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಕೂಡ ತಿಳಿಸಿದ್ದಾರೆ.
ಮಖಾ ಮಳೆಯ ಅಬ್ಬರಕ್ಕೆ ಕಾವೇರಿ ಸೇರಿದಂತೆ ಹಾರಂಗಿ, ಬೇತ್ರಿ, ಲಕ್ಷ್ಮಣತೀರ್ಥ ನದಿಗಳು ಉಕ್ಕಿಹರಿಯುತ್ತಿವೆ. ಕಾವೇರಿಯ ಪ್ರಮುಖ ಉಪನದಿಗಳಲ್ಲಿ ಒಂದಾದ ಹಾರಂಗಿಯೂ ಉಕ್ಕಿ ಹರಿಯುತ್ತಿರುವ ಕಾರಣ ಜಲಾಶಯ ಭರ್ತಿಯಾಗಿದೆ.
ರೈತರಲ್ಲಿ ಸಂತಸ
ಜಲಾಶಯದಲ್ಲಿ ನೂರು ಅಡಿ ನೀರು ಸಂಗ್ರಹವಾದರೆ ಜಲಾಶಯ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸಬಹುದು ಎಂಬ ಲೆಕ್ಕಾಚಾರದಲ್ಲಿ ರೈತರು ಸಂತಸಗೊಂಡಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಆರ್ ಎಸ್ ನಲ್ಲಿ ಅಧಿಕ ನೀರು ಸಂಗ್ರಹವಾದರೆ ನಾಲೆಗಳಲ್ಲಿ ನೀರು ಹರಿಸುವ ಸಂಬಂಧ ಶೀಘ್ರ ಐಸಿಸಿ ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶಗಳಲ್ಲಿ ರಾಗಿ ಬೆಳೆ ಬೆಳೆಯಲು ಮುಂದಾಗಿದ್ದ ರೈತರು ಮತ್ತೆ ಭತ್ತ ಬೆಳೆಯುವ ಕನಸು ಕಾಣಲಾರಂಭಿಸಿದೆ. ದೀರ್ಘಾವಧಿ ಭತ್ತದ ಬೆಳೆಗೆ ಪರ್ಯಾಯವಾಗಿ ಅಲ್ಪಾವಧಿಯಲ್ಲಿ ಬೆಳೆಯಬಹುದಾದ ರಾಶಿ ಐಆರ್ 64 ಭತ್ತ ಬೆಳೆಯಬಹುದು ಎಂಬ ಆಶಾಭಾವನೆಯೊಂದಿಗೆ ಅನ್ನದಾತರು ಕಾಯುತ್ತಿದ್ದಾರೆ.
ರಂಗನತಿಟ್ಟಿನಲ್ಲಿ ದೋಣಿವಿಹಾರ ಸ್ಥಗಿತ
ಕೆಆರ್ ಎಸ್ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿವಿಹಾರ ಸ್ಥಗಿತಗೊಳಿಸಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮಕ್ಕೆ ಬಂದ ಪ್ರವಾಸಿಗರು ನಿರಾಶೆಯಿಂದ ಹಿಂತಿರುಗುತ್ತಿದ್ದಾರೆ.












Click it and Unblock the Notifications