Congress Election Campaign: ವರುಣಾದಲ್ಲಿ ಸಿದ್ದರಾಮಯ್ಯ ಪರ ಆರ್ಯನ್ ಜೋಡಿಯ ಮೋಡಿ
ಮೈಸೂರು, ಮೇ 04: ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಬ್ಬರದ ಪ್ರಚಾರಕ್ಕೆ ಸಜ್ಜಾಗಿದೆ. ಕ್ಷೇತ್ರದ ತುಂಬೆಲ್ಲ ಇಂದು ಗುರುವಾರ ಸಿನಿಮಾ ತಾರೆಯರು ತುಂಬಿಕೊಂಡಿದ್ದಾರೆ. ಇವತ್ತಿನ ಪ್ರಚಾರದ ಹೈಲೇಟ್ ಅಂದರೆ ಅದು 'ಆರ್ಯನ್' ಚಿತ್ರ ಜೋಡಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಧುಮುಕಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸ್ಪರ್ಧಿಸುತ್ತಿದ್ದಾರೆ. ಅವರ ಪರ ಪಕ್ಷದ ಘಟಾನುಘಟಿ ನಾಯಕರ ಜೊತೆಗೆ ಗುರುವಾರ ಸಿನಿಮಾರಂಗದ ನಟ ನಟಿಯರು ಪ್ರಚಾರಕ್ಕಾಗಿ ಆಖಾಡ ಪ್ರವೇಶಿಸಿದ್ದಾರೆ. ಬಿಜೆಪಿ ಮಣಿಸಲು ತಂತ್ರ ರೂಪಿಸಿರುವ ಸಿದ್ದರಾಮಯ್ಯನವರಿಗೆ ನಟ-ನಟಿಯರು ಸೇರಿದಂತೆ ಕಲಾವಿದರಿಂದ ವರುಣಾ ಕ್ಷೇತ್ರ ರಂಗೇರಿದೆ.

ಇಂದು ಸಿದ್ದರಾಮಯ್ಯ ಪರ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಮತ್ತು ಮೋಹಕತಾರೆ ಮತ್ತು ಮಾಜಿ ಸಂಸದೆ ರಮ್ಯಾ ಅವರು ಪ್ರಚಾರಕ್ಕೆ ಇಳಿದಿದ್ದಾರೆ. ಅವರಿಬ್ಬರು ಸೇರಿ ಈ ಹಿಂದೆ ಆರ್ಯನ್ ಎಂಬ ಚಿತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಮತ್ತೆ ವರುಣಾದಲ್ಲಿ ಜೊತೆಗೆ ಪ್ರಚಾರ ಆರಂಭಿಸಿದ್ದಾರೆ.
ಅವರೊಂದಿಗೆ ಗೀತಾ ಶಿವರಾಜ್ ಮಾಜಿ ಶಾಸಕ ಮಧು ಬಂಗಾರಪ್ಪ, ಹಾಲಿ ಶಾಸಕ ಬಿ.ಝಡ್, ಜಮೀರ್ ಅಹಮದ್ ಖಾನ್, ಯತೀಂದ್ರ ಸಿದ್ದರಾಮಯ್ಯ ಅವರು ಸಹ ಇಂದು ಸಿದ್ದರಾಮಯ್ಯನವರಿಗೆ ಪ್ರಚಾರ ಕಾರ್ಯದಲ್ಲಿ ಸಾಥ್ ನೀಡಲಿದ್ದಾರೆ. ಸುಮಾರು ಬೆಳಗ್ಗೆ 10ಗಂಟೆಯಿಂದಲೇ ರೋಡ್ ಶೋ ಆರಂಭವಾಗಲಿದೆ. ಒಟ್ಟು ಕ್ಷೇತ್ರ 10 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತಬೇಟೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ಕಳೆದ ವಾರದ ಸಿದ್ದರಾಮಯ್ಯನವರು ವರುಣಾದಲ್ಲಿ ಇಡೀ ದಿನ ವ್ಯಾಪಕ ಪ್ರಚಾರ ಕೈಗೊಂಡಿದ್ದರು. ಆದರೆ ಈ ಬಾರಿ ಸಿದ್ದರಾಮಯ್ಯ ಸ್ಟಾರ್ ನಟ, ನಟಿಯರ ಜೊತೆಗೂಡೆ ಮತಯಾಚಿಸುತ್ತಿರುವುದು ಪ್ರಚಾರಕ್ಕೆ ಇನ್ನಷ್ಟು ಮೆರಗು ಮೂಡಿಸಿದೆ. ಹಾಗಾದರೆ ಯಾವ ಯಾರ ಊರುಗಳಲ್ಲಿ ಕಾಂಗ್ರೆಸ್‌ನಿಂದ ಪ್ರಚಾರ ನಡೆಯಲಿದೆ ಎಂಬ ವಿವರ ಹೀಗಿದೆ.

ವರುಣಾ ಕ್ಷೇತ್ರದಲ್ಲಿ ಬೆಳಗ್ಗೆ ಸುಮಾರು ಹತ್ತು ಗಂಟೆಗೆ ರೋಡ್ ಆರಂಭವಾಗಲಿ ಮೊದಲು ಕ್ಷೇತ್ರವನ್ನು ಒಂದು ಸುತ್ತು ಸುತ್ತುವರಿಯಲಿದೆ. ಬಳಿಕ ರಾಂಪುರದಿಂದ ಗೊದ್ದನಪುರ, ಮರಳೂರು, ತಾಂಡವಪುರ ಗ್ರಾಮಗಳಲ್ಲಿ ಸಿದ್ದರಾಮಯ್ಯ ಪರ ಕಲಾವಿದರ ಮತಯಾಚನೆ ಮಾಡಲಿದ್ದಾರೆ.
ಮಧ್ಯಾಹ್ನ 12ಗಂಟೆ ನಂತರ ಕೆಂಪಸಿದ್ದನಹುಂಡಿ, ಹದಿನಾರು, ಹುಳಿಮಾವು, ಬಳಿಕ ಸಂಜೆ 4 ಗಂಟೆ ನಂತರ ಸುತ್ತೂರು, ಬಿಳಿಗೆರೆ, ನಗರ್ಲೆ, ಮಲ್ಲೂಪುರ ಗ್ರಾಮಗಳಲ್ಲಿ ರೋಡ್ ಶೋ ನಡೆಯಲಿದೆ. ಸಿದ್ದರಾಮಯ್ಯ ಪರ ಪ್ರಚಾರದಲ್ಲಿ ಸ್ಥಳೀಯ ಮುಖಂಡರು, ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಮೈಸೂರ ಜಿಲ್ಲೆ ಭಾಗದ ಅಭಿಮಾನಿಗಳು ತಮ್ಮ ನೆಚ್ಚಿನ ಶಿವರಾಜ್ ಕುಮಾರ್ ಮತ್ತು ಮೋಹಕತಾರೆ ರಮ್ಯಾರನ್ನು ಕಣ್ತುಂಬಿಕೊಳ್ಳಲಿದ್ದಾರೆ.












Click it and Unblock the Notifications