"ವಿವಿ ಕುಲಪತಿಗಳ ಕಾಯ್ದೆಗೆ ತಿದ್ದುಪಡಿ ತರುವುದು ಅಪಾಯಕಾರಿ ಬೆಳವಣಿಗೆ'
ಮೈಸೂರು, ಫೆಬ್ರವರಿ 25: ವಿಶ್ವವಿದ್ಯಾಲಯದ ಕುಲಪತಿಗಳ ಆಯ್ಕೆ ಪ್ರಕ್ರಿಯೆ ಕುರಿತ ಮಾನದಂಡಗಳನ್ನು ಮಾರ್ಪಡಿಸುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ 2000 ಗೆ ತಿದ್ದುಪಡಿ ತರಲು ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ ಎಂದು ಮೈಲ್ಯಾಕ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ವೆಂಕಟೇಶ್ ಕಳವಳ ವ್ಯಕ್ತಪಡಿಸಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಉನ್ನತ ಶಿಕ್ಷಣ ಕೇಂದ್ರವಾಗಿರುವ ವಿಶ್ವವಿದ್ಯಾನಿಲಯದ ಸ್ವಾಯತ್ತತೆಯನ್ನು ಮೊಟಕುಗೊಳಿಸುವ ಹುನ್ನಾರ. ರಾಜ್ಯದ ಹಲವು ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ರಾಷ್ಟ್ರಮಟ್ಟದಲ್ಲಿ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ತಿದ್ದುಪಡಿಯಿಂದಾಗಿ ಗುಣಮಟ್ಟ ಇನ್ನಷ್ಟು ಹಾಳಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಯಾವ ಉದ್ದೇಶವನ್ನಿಟ್ಟುಕೊಂಡು ಈ ತಿದ್ದುಪಡಿ ತರಲು ಮುಂದಾಗಿದೆ ಎನ್ನುವುದು ಸಾರ್ವಜನಿಕರಿಗೆ ಮೊದಲು ಮನವರಿಕೆಯಾಗಬೇಕು. ಶಿಕ್ಷಣ ತಜ್ಞರು ತಮ್ಮ ಅನಿಸಿಕೆ ಅಭಿಪ್ರಾಯ ಮುಂದಿಡಬೇಕಾಗಿದೆ. ಜನಾಭಿಪ್ರಾಯ ಪಡೆಯದೇ ಗೌಪ್ಯವಾಗಿ ತಿದ್ದುಪಡಿ ಮೂಲಕ ಕೆಲವು ಅಂಶಗಳನ್ನು ಸೇರಿಸಲು ಹೊರಟಿರುವ ಸರ್ಕಾರದ ನಡೆ ಅನುಮಾನಾಸ್ಪದವಾಗಿದೆ ಎಂದರು.

ಮುಖ್ಯಮಂತ್ರಿಯವರ ಅಧ್ಯಕ್ಷತೆಯ ಸಮಿತಿಯು ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ನೇಮಿಸಲು ನಿರ್ಧರಿಸಿರುವುದು ಸಮಂಜಸವಲ್ಲ. ಮುಖ್ಯಮಂತ್ರಿಯಾದವರು ರಾಜ್ಯದ ರಾಜಕೀಯ ಆಡಳಿತದ ಮುಖ್ಯಸ್ಥರೇ ಹೊರತು ಶಿಕ್ಷಣ ತಜ್ಞರಲ್ಲ.
ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಹೊಂದಿರುವ ತಜ್ಞರ ಮೂಲಕ ರೂಪಿಸಲ್ಪಟ್ಟ ಉನ್ನತ ಶಿಕ್ಷಣ ನೀತಿ ನಿಯಮಗಳನ್ನು ಜಾರಿಗೆ ತಂದು ಅದನ್ನು ಕಾಪಾಡುವುದು ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಮಂತ್ರಿಯ ಕರ್ತವ್ಯ. ಆದರೆ ಅವರೇ ನೀತಿ ನಿಯಮಗಳನ್ನು ರೂಪಿಸುವುದು, ಕುಲಪತಿಗಳನ್ನು ಆಯ್ಕೆ ಮಾಡಿ ನೇಮಿಸುವುದು ಸರಿಯಾದ ನಡವಳಿಕೆಯಲ್ಲ ಎಂದು ಹೇಳಿದರು.












Click it and Unblock the Notifications