ಕಿಂಗ್ ಫಿಶರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ: UB ಗ್ರೂಪ್‌ನಿಂದ ಸ್ಪಷ್ಟನೆ
ಮೈಸೂರು, ಆಗಸ್ಟ್ 17: ಕಿಂಗ್ ಫಿಶರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಮೈಸೂರು ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, 25 ಕೋಟಿ ರೂ ಮೌಲ್ಯದ 78,678 ಬಾಕ್ಸ್ ಬಿಯರ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ಸ್ಪಷ್ಟನೆ ನೀಡಿದೆ.
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಯುನೈಟೆಡ್ ಬ್ರೂವರೀಸ್ ಕಂಪನಿ ತಯಾರಿಸಿದ್ದ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿತ್ತು. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಪ್ರತ್ಯೇಕ ಪ್ರಕಟಣೆ ಹೊರಡಿಸಿರುವ ಕಂಪನಿ, ಇದು ಕಿಂಗ್‌ಫಿಷರ್ ಅಲ್ಟ್ರಾದ ಒಂದೇ ಬ್ಯಾಚ್‌ನಲ್ಲಿ ಮಾತ್ರ ಕಂಡು ಬಂದ ಲೋಪವಾಗಿದ್ದು, ಕಿಂಗ್‌ಫಿಷರ್ ಸ್ಟ್ರಾಂಗ್‌ನಲ್ಲಿ ಅಲ್ಲ ಎಂದು ತಿಳಿಸಿದೆ.

ಯುನೈಟೆಡ್ ಬ್ರೂವರೀಸ್ ಕಂಪನಿ ನೀಡಿದ ಸ್ಪಷ್ಟನೆ ಏನು..?
'ಯುಬಿಎಲ್ ಮೈಸೂರಿನ ನಂಜನಗೂಡು ಬ್ರೂವರಿಯಲ್ಲಿ ಜುಲೈ 15 ರಂದು ತಯಾರಿಸಿದ ಕಿಂಗ್‌ಫಿಶರ್ ಅಲ್ಟ್ರಾ ಬಿಯರ್ ಬಾಟಲಿಗಳ ಸಣ್ಣ ಪ್ರಮಾಣದಲ್ಲಿ ಲೋಪ ಹೊಂದಿದೆ. ಈ ಬಗ್ಗೆ ನಾವು ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಮತ್ತು ಅವರ ತನಿಖೆಗೆ ಸಕ್ರಿಯವಾಗಿ ಸಹಕರಿಸುತ್ತಿದ್ದೇವೆ. ಇದು ಕಿಂಗ್‌ಫಿಷರ್ ಅಲ್ಟ್ರಾದ ಒಂದೇ ಬ್ಯಾಚ್‌ನಲ್ಲಿ ಮಾತ್ರ ಕಂಡು ಬಂದಿದೆ. ಕಿಂಗ್‌ಫಿಷರ್ ಸ್ಟ್ರಾಂಗ್‌ನಲ್ಲಿ ಅಲ್ಲ.
ನಾವು ಕಿಂಗ್‌ಫಿಷರ್ ಅಲ್ಟ್ರಾ ಬ್ಯಾಚ್‌ಅನ್ನು NABLನಿಂದ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದೇವೆ. ಇದು ಮಾರ್ಗಸೂಕದಂತಿದೆ. ಆದ್ದರಿಂದ ಇದು ಆರೋಗ್ಯದ ಮೇಲೆ ಯಾವುದೇ ಅಪಾಯಗಳನ್ನು ಉಂಟುಮಾಡುವುದಿಲ್ಲ ಎಂದು ಪರೀಕ್ಷೆಯಲ್ಲಿ ದೃಢಪಡಿಸಿದೆ. ನಾವು ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದೇವೆ. ನಮ್ಮ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವುದು ನಮ್ಮ ಕರ್ತವ್ಯವಾಗಿದೆ' ಎಂದು ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ವಕ್ತಾರರು ತಿಳಿಸಿದ್ದಾರೆ.
ಏನಿದು ಘಟನೆ..?
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಯುನೈಟೆಡ್ ಬ್ರಿವರಿಸ್ ಕಂಪನಿ ತಯಾರಿಸಿದ್ದ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಅಲ್ಟ್ರಾ ಲ್ಯಾಗರ್ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದ್ದು, 7e ಮತ್ತು 7c ನಮೂನೆಯ ದಿನಾಂಕ 15-07-23ರಂದು ಬಾಟಿಲಿಂಗ್ ಆದ ಬಿಯರ್‌ನಲ್ಲಿ ಈ ಸೆಡಿಮೆಂಟ್ ಅಂಶ ಕಂಡುಬಂದಿತ್ತು. ಮಾಹಿತಿ ತಿಳಿದ ಕೂಡಲೇ ಬಿಯರ್ ಸ್ಯಾಂಪಲ್ ಅನ್ನು ಕೆಮಿಕಲ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈ ಕುರಿತು 2-08-2023ರಂದು ಕೆಮಿಕಲ್ ವರದಿ ಬಂದಿದ್ದು, ವರದಿಯಲ್ಲಿ ಅನ್ ಫಿಟ್ ಫಾರ್ ಹ್ಯುಮನ್ ಕನ್ಸಂಪ್ಷನ್ ಅಂದರೆ ಮಾನವರ ಸೇವನೆಗೆ ಯೋಗ್ಯವಲ್ಲ ಎಂದು ತಿಳಿಸಲಾಗಿತ್ತು.
ಈ ಅವಧಿಯಲ್ಲಿ ಒಟ್ಟು 78,678 ಬಾಕ್ಸ್ ಬಿಯರ್ ಬಾಕ್ಸ್ ಸರಬರಾಜಾಗಿತ್ತು. ಈ ಬಿಯರ್‌ಗಳನ್ನು ರಿಟೈಲ್‌ನಲ್ಲೂ ಸೇಲ್ ಆಗದಂತೆ ತಡೆಹಿಡಿಯಲಾಗಿತ್ತು. ಜೊತೆಗೆ ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣ ಕಂಪನಿಯ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.












Click it and Unblock the Notifications