ಮೈಸೂರು: ಇಲ್ಲಿದೆ ಜನರೇ ತ್ಯಾಜ್ಯ ಹೊರಬೇಕಾದ ದುಃಸ್ಥಿತಿ!
ಮೈಸೂರು, ಅಕ್ಟೋಬರ್ 4: ರಸ್ತೆಯ ಎರಡು ಬದಿಯಲ್ಲಿ ನಿರ್ಮಿಸಿರುವ ಚರಂಡಿ ಅರ್ಧಕ್ಕೆ ನಿಂತು ತ್ಯಾಜ್ಯ ನೀರು ಹರಿದುಹೋಗದ ಕಾರಣದಿಂದ ಮನೆಯಿಂದ ಹೊರಬಂದು ಶೇಖರಣೆಗೊಳ್ಳುವ ತ್ಯಾಜ್ಯವನ್ನು ಜನರೇ ಹೊತ್ತೊಯ್ಯುತ್ತಿರುವ ಪ್ರಕರಣ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಬಳಿಯ ಕೃಷ್ಣರಾಜಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಚರಂಡಿಯನ್ನು ನಿರ್ಮಿಸಲಾಗಿದೆಯಾದರೂ ಅದನ್ನು ಸಂಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಲಾಗಿದೆ. ಕಾರಣ ಚರಂಡಿ ನೀರನ್ನು ಊರಿನಿಂದ ಹೊರಕ್ಕೆ ಹರಿಸಲು ಚರಂಡಿ ನಿರ್ಮಾಣ ಮಾಡಲು ಪಕ್ಕದ ಜಮೀನಿನವರು ಬಿಡುತ್ತಿಲ್ಲವಂತೆ. ಹೀಗಾಗಿ ಚರಂಡಿಯಿದ್ದರೂ ತ್ಯಾಜ್ಯ ಹರಿಯುತ್ತಿಲ್ಲ.
ಪರಿಣಾಮ ಚರಂಡಿಯಲ್ಲೇ ಶೇಖರಣೆಗೊಂಡು ದುರ್ವಾಸನೆ ಬೀರುತ್ತಾ ಸೊಳ್ಳೆಗಳ ಆವಾಸ ಸ್ಥಾನವಾಗಿ ರೋಗ ಹರಡಲು ಕಾರಣವಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ತಮ್ಮ ಮನೆಯ ಮುಂದಿನ ಚರಂಡಿಯಲ್ಲಿ ಶೇಖರವಾಗಿರುವ ತ್ಯಾಜ್ಯವನ್ನು ತೆಗೆದು ಬಕೆಟ್‍ಗಳಲ್ಲಿ ತುಂಬಿಸಿ ಹೊರಕ್ಕೆ ಚೆಲ್ಲುವ ಕೆಲಸವನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ. ಇದು ಹಲವು ಸಮಯಗಳಿಂದ ನಡೆಯುತ್ತಿದ್ದರೂ ಯಾರೂ ಕೂಡ ಇತ್ತ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ದುರ್ವಾಸನೆ ಸಹಿಸಿಕೊಂಡು ಜೀವನ
ಹಾಗೆನೋಡಿದರೆ ಈ ಗ್ರಾಮ ಮೈಸೂರು ಚಾಮರಾಜನಗರದ ಮುಖ್ಯ ರಸ್ತೆಯ ಕೂಗಳತೆಯ ದೂರದಲ್ಲಿದೆ. ಕುರುಬ, ಲಿಂಗಾಯಿತ, ಸವಿತಾ ಸಮಾಜ, ಬ್ರಾಹ್ಮಣ ಜೊತೆಗೆ ಬೇರೆ ಬೇರೆ ಸಮಾಜದ ಸುಮಾರು ಇನ್ನೂರು ಕುಟುಂಬಗಳು ಈ ಗ್ರಾಮದಲ್ಲಿ ನೆಲೆಸಿವೆ. ಗ್ರಾಮಸ್ಥರಿಗೆ ನೀಡಿರುವ ನಿವೇಶಗಳು ಸರಿಯಾದ ಅಳತೆಯಲ್ಲಿಯೇ ಇವೆ. ಜತೆಗೆ ಮೂಲಭೂತ ವಸತಿ ಸೌಕರ್ಯಗಳಿಗೆ ರಸ್ತೆಯನ್ನು ದಶಕಗಳ ಹಿಂದೆ ಸಮರ್ಪಕವಾಗಿಯೇ ಮಾಡಲಾಗಿದೆ. ಆದರೆ ಗ್ರಾಮದ ಸ್ವಾಸ್ಥ್ಯ ಕಾಪಾಡಲು ಬೇಕಾದ ಚರಂಡಿ ವ್ಯವಸ್ಥೆ ಇಲ್ಲಿ ಇಲ್ಲದ ಕಾರಣಗಳಿಂದಾಗಿ ಗ್ರಾಮಸ್ಥರು ದುರ್ವಾಸನೆಯನ್ನು ಅನುಭವಿಸಿಕೊಂಡು ರೋಗದ ಭಯದಲ್ಲಿ ಬದುಕುವಂತಾಗಿದೆ.

ಚರಂಡಿ ನಿರ್ಮಿಸದೆ ಹಣ ಗುಳುಂ?
ಗ್ರಾಮದಲ್ಲಿ ಬೀದಿಯ ರಸ್ತೆಯ ಎರಡು ಬದಿಯಲ್ಲಿ ಚರಂಡಿ ನಿರ್ಮಾಣಕ್ಕೆ ಒಂದು ಬದಿಯಲ್ಲಿ ಹಳ್ಳ ತೆಗೆಯಲಾಗಿದೆ, ಆದರೆ ಚರಂಡಿ ನೀರು ಊರಿನಿಂದ ಹೊರಕ್ಕೆ ಹರಿಸುವ ವಿಚಾರದಲ್ಲಿ ಪಕ್ಕದ ಜಮೀನಿನವರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆಂದು ಕಾರಣ ನೀಡಿ ಚರಂಡಿ ಕೆಲಸ ನಿಲ್ಲಿಸಲಾಗಿದೆ. ಆದರೆ ಚರಂಡಿ ನಿರ್ಮಾಣವಾಗಿದೆ ಎಂದು ಹಣ(ಬಿಲ್ಲು) ಪಡೆಯಲಾಗಿದೆ ಎಂಬುದು ಗ್ರಾಮದ ಹಲವರ ಆರೋಪ.

ತ್ಯಾಜ್ಯ ತೆಗೆದು ಹೊರಕ್ಕೆ ಸುರಿಯುತ್ತಾರೆ!
ಚರಂಡಿಗಳ ನಿರ್ಮಾಣ ಪೂರ್ಣವಾಗದೆ ಇರುವುದರಿಂದ ಪ್ರತಿ ಮನೆಯ ತ್ಯಾಜ್ಯ, ಸ್ನಾನದ ನೀರು ಊರಿನಿಂದ ಹೊರಕ್ಕೆ ಹೋಗದೆ ಮನೆಯ ಮುಂದೆಯೇ ನಿಲ್ಲುತ್ತದೆ. ಹೀಗೆ ಶೇಖರವಾಗುವ ತ್ಯಾಜ್ಯವನ್ನು ಬಕೆಟ್ ಗಳಲ್ಲಿ ಮೊಗೆದು ಊರಿನಿಂದ ಹೊರಕ್ಕೆ ಚೆಲ್ಲಬೇಕಾದ ದುಃಸ್ಥಿತಿ ಗ್ರಾಮಸ್ಥರದಾಗಿದೆ.

ಮಳೆಯಾದರೆ ಕೆರೆಗಳಾಗುವ ಬೀದಿ
ಊರು ಸಮತಟ್ಟಾದ ಪ್ರದೇಶದಲ್ಲಿರುವುದರಿಂದ ಮನೆಯಿಂದ ತ್ಯಾಜ್ಯ ನೀರು ಮತ್ತು ಮಳೆಯ ನೀರು ರಸ್ತೆಯಲ್ಲಿ ನಿಲ್ಲುತ್ತದೆ. ಹೆಚ್ಚು ಮಳೆಯಾದರೆ ಬೀದಿಗಳು ಕೆರೆಗಳಾಗಿ ಮಾರ್ಪಟ್ಟು ನೀರು ಮನೆಗೆ ನುಗ್ಗುತ್ತದೆ. ನೀರು ಹರಿದು ಹೋಗದೆ ಇರುವುದರಿಂದ ಸೊಳ್ಳೆಗಳ ಆವಾಸಸ್ಥಾನವಾಗಿ ಸಾಂಕ್ರಾಮಿಕ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ.

ಮಾನವ ಹಕ್ಕು ಹೋರಾಟಗಾರರ ಪರಿಶೀಲನೆ
ಗ್ರಾಮಸ್ಥರು ಅನುಭವಿಸುತ್ತಿರುವ ತೊಂದರೆ ಬಗ್ಗೆ ತಿಳಿದು, ಸ್ಥಳಕ್ಕೆ ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ, ಜನ ಸಂಗ್ರಾಮ ಪರಿಷತ್ ತಂಡದ ಸದಸ್ಯರು ಸೇರಿದಂತೆ ಗೋವಿಂದರಾಜು, ಗೋವಿಂದಸ್ವಾಮಿ, ನಗರ್ಲೆ ವಿಜಯ ಕುಮಾರ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಸಮಸ್ಯೆಗೆ ಪರಿಹಾರ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications