ಮೈಸೂರಿನಲ್ಲಿ ನೇಣಿಗೆ ಶರಣಾದ ವಿವಾಹಿತ ಪ್ರೇಮಿಗಳು
ಮೈಸೂರು, ಜುಲೈ 2: ಮೈಸೂರಿನಲ್ಲಿ ಇಬ್ಬರು ವಿವಾಹಿತರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಗರದಲ್ಲಿರುವ ರಮಾಬಾಯಿನಗರ ನಿವಾಸಿ ಸಂತೋಷ್‌ಕುಮಾರ್ (34) ಹಾಗೂ ಜೆ.ಪಿ.ನಗರದ ನಿವಾಸಿ ಸುಮಿತ್ರಾ (35) ಆತ್ಮಹತ್ಯೆ ಮಾಡಿಕೊಂಡವರು. ಇವರಿಬ್ಬರೂ ಸಂತೋಷ್‌ಕುಮಾರ್ ನಿವಾಸದಲ್ಲಿ ಒಂದೇ ಹಗ್ಗದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂತೋಷ್‌ಕುಮಾರ್ ಅವರು ಅರ್ಚನಾ ಎಂಬುವವರನ್ನು, ಸುಮಿತ್ರಾ ಅವರು ಸಿದ್ದರಾಜು ಎಂಬುವವರನ್ನು ವಿವಾಹವಾಗಿದ್ದರು. ಇಬ್ಬರಿಗೂ ಮಕ್ಕಳಿದ್ದರು. ಇವರಿಬ್ಬರೂ ಜೆ.ಪಿ.ನಗರದ ಕಾರ್ಖಾನೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ಆತ್ಮೀಯತೆ ಹೆಚ್ಚಿತ್ತು. ಕೆಲ ದಿನಗಳ ಹಿಂದೆಯಷ್ಟೇ ಇಬ್ಬರ ಮಧ್ಯೆ ಅಕ್ರಮ ಸಂಬಂಧ ಇದೆ ಎಂಬ ಸುದ್ದಿ ಹಬ್ಬಿ ರಾಜಿ ಪಂಚಾಯಿತಿ ಸಹ ನಡೆದಿತ್ತು. ಸಂತೋಷ್‌ಕುಮಾರ್ ಪತ್ನಿ ಅರ್ಚನಾ ಊರಿಗೆ ತೆರಳಿದ್ದ ಸಂದರ್ಭ, ಸುಮಿತ್ರಾ ಮನೆಗೆ ಬಂದಿದ್ದಾರೆ. ಅಕ್ಕಪಕ್ಕದವರಿಂದ ಮಾಹಿತಿ ಪಡೆದ ಅರ್ಚನಾ ಮನೆಗೆ ಬಂದು ಬಾಗಿಲು ತೆರೆಯುವಂತೆ ಗಲಾಟೆ ಮಾಡಿದ್ದಾರೆ. ಈ ವೇಳೆ ಸುಮಿತ್ರಾ ಪತಿ ಸಿದ್ದರಾಜು ಸಹ ಮನೆ ಕಡೆ ಬಂದು ಗಲಾಟೆ ಆರಂಭಿಸಿದ್ದಾರೆ.

ಅರ್ಚನಾ ಮಹಿಳಾ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಇದರಿಂದ ಮನನೊಂದ ಸಂತೋಷ್‌ಕುಮಾರ್ ಹಾಗೂ ಸುಮಿತ್ರಾ ನೇಣಿಗೆ ಶರಣಾಗಿದ್ದಾರೆ. ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.











Click it and Unblock the Notifications