ಕೊರೊನಾದಿಂದ ನಂಜನಗೂಡಿನಲ್ಲಿ ನಡೆಯಿತು ಪುಟ್ಟ ರಥೋತ್ಸವ
ಮೈಸೂರು, ಏಪ್ರಿಲ್ 04: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಪಂಚ ಮಹಾರಥೋತ್ಸವ ರದ್ದಾಗಿದೆ. ಆದರೆ ದೇವಾಲಯದ ಒಳಗೆ ದೇವಾಲಯದ ಆಡಳಿತ ಮಂಡಳಿಯಿಂದ ಸಾಂಪ್ರದಾಯಿಕ ಪೂಜೆಗೆ ಅನುಮತಿ ನೀಡಲಾಗಿತ್ತು.
ಹೀಗಾಗಿ ರಥೋತ್ಸವವನ್ನು ಸಾಂಕೇತಿಕವಾಗಿ ಇಂದು ನಡೆಸಲಾಯಿತು. ದೊಡ್ಡ ತೇರಿನ ಬದಲು ಪುಟಾಣಿ ತೇರಿನ ಮೂಲಕ ರಥೋತ್ಸವ ನಡೆಸಲಾಯಿತು. ರಥೋತ್ಸವಕ್ಕೆ ಲಕ್ಷ ಮಂದಿ ಸೇರುವ ಜಾಗದಲ್ಲಿ ಕೇವಲ 5 ಮಂದಿ ಇದ್ದರು. ಈ ಹಿನ್ನೆಲೆಯಲ್ಲಿ ಅರ್ಚಕರು, ಕೆಲವು ಸಿಬ್ಬಂದಿ ಸೇರಿ ಸರಳ ಆಚರಣೆ ಮಾಡಿದರು.
ನಂಜನಗೂಡು ಯುವ ಬ್ರಿಗೇಡ್ ಯುವಕರು ಚಿಕ್ಕ ತೇರು ನಿರ್ಮಿಸಿ ದೇವಸ್ಥಾನದ ಸುತ್ತ ಎಳೆದರು. ಮುಂಜಾನೆ 5.30ಕ್ಕೆ ದೇವಸ್ಥಾನದ ಹೊರ ಭಾಗದಲ್ಲಿ ಪೂಜೆ ಸಲ್ಲಿಸಿ ರಥೋತ್ಸವ್ಕೆ ಚಾಲನೆ ನೀಡಲಾಯಿತು. ದೇವಾಲಯದ ಒಳ ಆವರಣದಲ್ಲೇ ಪುಟ್ಟ ರಥದಲ್ಲಿ ಉತ್ಸವ ಮೂರ್ತಿ ಪೂಜೆ ನಡೆಯಿತು.

ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಕಾರಣಕ್ಕೆ ನಂಜನಗೂಡು ಸಂಪೂರ್ಣ ಸ್ತಬ್ಧವಾಗಿದೆ. ಹೀಗಾಗಿ ಸರ್ಕಾರದ ವತಿಯಿಂದ ನಡೆಯುತ್ತಿದ್ದ ಗೌತಮ ಪಂಚ ರಥೋತ್ಸವ ರದ್ದಾಗಿದೆ.












Click it and Unblock the Notifications