ಮೈಸೂರು-ಕೊಡಗು:ಅಭ್ಯರ್ಥಿಗಳಿಂದ ಇಂದು ಕಡೆ ಕ್ಷಣದ ಕಸರತ್ತು
ಮೈಸೂರು, ಏಪ್ರಿಲ್ 16: ಮೊದಲ ಹಂತದ ಲೋಕಸಭಾ ಚುನಾವಣೆಯು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಏ.18ರಂದು ಗುರುವಾರ ನಡೆಯಲಿದ್ದು, ಜಿಲ್ಲಾಡಳಿತ ಸಜ್ಜಾಗಿದೆ. ಇನ್ನು ಈ ಎರಡೂ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಗಮನಿಸಿದಂತೆ ಅದರಲ್ಲೂ ಕೊಡಗಿನತ್ತ ಗಮನಿಸಿದರೆ ಮೈಸೂರಿಗೆ ನೀಡಿದ ಪ್ರಾಶಸ್ತ್ಯವನ್ನೇನು ಉಭಯ ಪಕ್ಷದ ಮುಖಂಡರು ಪ್ರಚಾರಕ್ಕಾಗಿ ನೀಡಲಿಲ್ಲ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಬಹುನಿರೀಕ್ಷಿತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಡೆಯ ದಿನದ ಆಟ ಶನಿವಾರ, ಭಾನುವಾರ ಹಾಗೂ ಸೋಮವಾರ ಹೊರತುಪಡಿಸಿದರೆ ಬೇರೆ ದಿನಗಳೇನು ಪ್ರಚಾರದ ಭರಾಟೆ ಕಂಡು ಬರಲಿಲ್ಲ. ಪ್ರಮುಖ ನಾಯಕರೇ ಮುನಿಸು ಪ್ರದರ್ಶಿಸಿ ಪ್ರಚಾರದಿಂದ ದೂರ ಉಳಿದರು.
ಕೇವಲ ಭಾನುವಾರವಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಿ.ಟಿ.ದೇವೇಗೌಡ ಅವರು ಒಗ್ಗೂಡಿ ಮೈತ್ರಿ ಅಭ್ಯರ್ಥಿ ಸಿ.ಎಚ್‌ವಿಜಯಶಂಕರ್ ಪರ ಪ್ರಚಾರ ಕೈಗೊಂಡು ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ತಮ್ಮಲ್ಲೇನೂ ಸಮಸ್ಯೆಯಿಲ್ಲವೆಂಬಂತೆ ಬಿಂಬಿಸಿದರು.

ಇನ್ನು ಬಿಜೆಪಿ ವಿಚಾರಕ್ಕೆ ಬಂದರೆ ಆರಂಭದಿಂದಲೂ ತಣ್ಣನೆಯ ಪ್ರಚಾರ ನಡೆಸಿತ್ತು. ಕಡೆಯ ವಾರ ಏ.9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಕಾರ್ಯಕರ್ತರಲ್ಲಿ ಪ್ರಚಾರ ಕಾವು ಪಡೆದುಕೊಂಡಿತ್ತು. ಪ್ರತಾಪ್ ಸಿಂಹರವರು ಸಹ ಎಡಬಿಡದೆ ಕಳೆದ 20 ದಿನಗಳಿಂದ ಮೈಸೂರು - ಕೊಡಗು ಕ್ಷೇತ್ರದ ಹಳ್ಳಿ- ಹಳ್ಳಿಗಳಲ್ಲಿ ಸುತ್ತಿ ತಮ್ಮ ಪ್ರಚಾರ ಕಾರ್ಯವನ್ನು ನಡೆಸಿದರು. ಅಲ್ಲದೇ ತಮ್ಮ ಪರವಾಗಿ ಪ್ರಚಾರ ನಡೆಸಲು ಅನೇಕ ನಾಯಕರನ್ನು ಸಹ ಮೈಸೂರಿಗೆ ಬರಮಾಡಿಕೊಂಡದ್ದು ವಿಶೇಷವಾಗಿತ್ತು.

ಈ ಎಲ್ಲಾ ಸಮಾವೇಶ, ಸಭೆ, ಪ್ರಚಾರಕ್ಕೆ ಇಂದು ಸಂಜೆ 6 ಕ್ಕೆ ಬ್ರೇಕ್ ಬೀಳಲಿದ್ದು, ಇನ್ನೇನಿದ್ದರೂ 48 ಗಂಟೆಗಳ ಬಳಿಕ ಅಭ್ಯರ್ಥಿಯ ಹಣೆಬರಹ ಮತಪೆಟ್ಟಿಗೆಯಲ್ಲಿ ಬಂಧಿಯಾಗುವುದೊಂದೇ ಬಾಕಿ.












Click it and Unblock the Notifications