ಹುಲಿ ಗುಂಡಿಕ್ಕಲು ಆದೇಶಿಸಿದ್ದಕ್ಕೆ ಓದುಗರ ಆಕ್ರೋಶ

ಬೆಂಗಳೂರು, ಡಿ. 4 : "ದುರಂತದ ವಿಷಯ! ಪ್ರಾಣಿಗಳಿಗೆ ಬುದ್ಧಿ, ಯೋಚನಾಶಕ್ತಿ ಇಲ್ಲ ಸರಿ, ಆದರೆ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡ್ತಿದ್ದಾರೆ? ಕಂಡಲ್ಲಿ ಗುಂಡು ಇಡೋದು ಬಿಟ್ಟು ಏನು ಕಲ್ತಿದ್ದಾರೆ? ಉಗ್ರಗಾಮಿಗಳಿಗೆ ಕಂಡಲ್ಲಿ ಗುಂಡು ಇಡುವ ಗಂಡೆದೆ ಇಲ್ಲ. ಆದರೆ ಪ್ರಾಣಿಗಳ ಮೇಲೆ ತಮ್ಮ ಈ ತರಹದ ಶೌರ್ಯ ಪ್ರದರ್ಶಿಸುವುದು ಸೂಕ್ತವೇ?"

ಹೀಗೆಂದು, ಮೈಸೂರಿನಲ್ಲಿ ನಾಲ್ಕು ಜನರನ್ನು ಬಲಿತೆಗೆದುಕೊಂಡಿರುವ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಲು ಸರಕಾರ ಆದೇಶಿಸಿದ್ದಕ್ಕೆ ಪ್ರತಿಯಾಗಿ ಒನ್ಇಂಡಿಯಾ ಕನ್ನಡ ಓದುಗರೊಬ್ಬರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಗ್ರಗಾಮಿಗಳನ್ನು ಗುಂಡಿಕ್ಕಲು ಗುಂಡಿಗೆ ಇಲ್ಲದಂತಹ ಇವರು ಅಪರೂಪದ ಪ್ರಾಣಿಯಾದ ಹುಲಿಯ ಮೇಲೆ ತಮ್ಮ ಶೌರ್ಯ ತೋರುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಇದೇ ರೀತಿಯ ಆಕ್ರೋಶವನ್ನು ಇತರ ಹಲವಾರು ಓದುಗರು ವ್ಯಕ್ತಪಡಿಸಿದ್ದಾರೆ. "ಹೊಣೆಗೇಡಿ ಸರಕಾರ, ಗೋಸುಂಬೆ ವೇಷದ ಪ್ರಾಣಿ ದಯಾ ಸಂಘ" ಎಂದು ರಾಘವೇಂದ್ರ ನಾವಡ ಅವರು ವ್ಯಂಗ್ಯ ಮಾತಿನಿಂದ ಸರಕಾರವನ್ನು ಇರಿದಿದ್ದರೆ, "ಹುಲಿಗಳನ್ನು ಕೊಂದವರಿಗೆ ಏನು ಮಾಡಬೆಕೆನ್ನುತ್ತದೆ ಸರ್ಕಾರ?" ಎಂದು ಆನಂದ್ ಎಂಬುವವರು ಕೈಲಾಗದ ಸರಕಾರವನ್ನು ತದುಕಿದ್ದಾರೆ. [ಹುಲಿಗೆ ನಾಲ್ವರ ಬಲಿ]

Tiger menace : Readers vent ire at shoot at sight order

ಒಟ್ಟಾರೆಯಾಗಿ, ದಯವಿಟ್ಟು ಹುಲಿಯನ್ನು ಕೊಲ್ಲಬೇಡಿ, ಅದನ್ನು ಹಿಡಿಯಿರಿ ಎಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದೆ. ಕರ್ನಾಟಕದಲ್ಲಿ 'ರಾಷ್ಟ್ರೀಯ ಪ್ರಾಣಿ'ಯ ಸಂತತಿ ಅಳಿವಿನ ಅಂಚಿಗೆ ಹೋಗಿರುವಾಗ, ಇನ್ನುಳಿದ ಹುಲಿಗಳನ್ನಾದರೂ ಉಳಿಸಿಕೊಳ್ಳಲು ಯತ್ನ ಮಾಡುವ ಬದಲು, ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಎಂದು ಹೇಳಿರುವುದು ಸರಕಾರದ ಹೇಡಿತನದ ಸಂಕೇತ.

ಮೈಸೂರು ಜಿಲ್ಲೆಯಲ್ಲಿ ಎಚ್.ಡಿ. ಕೋಟೆಯ ಬಳಿ ಕಳೆದ ವಾರದೊಳಗೆ ನಾಲ್ಕು ಜನರನ್ನು ಖೂಳ ವ್ಯಾಘ್ರ ಬಲಿ ತೆಗೆದುಕೊಂಡಿದ್ದು, ಗ್ರಾಮಸ್ಥರಿಗೆ ಮಾತ್ರವಲ್ಲ, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ತೊಡಗಿಕೊಂಡಿರುವ ಶಾಸಕರಿಗೂ ಬಿಸಿ ಮುಟ್ಟಿಸಿದೆ. ಡಿ.3ರಂದು ಚಿಕ್ಕಬರಗಿಯ ಬಸಪ್ಪ, ನ.30ರಂದು ಡಿಪಿ ಕುಪ್ಪೆಯ ಸುರೇಶ್, ನ.29ರಂದು ಸೀಗೋಡಿ ಹಾಡಿಯ ಚೆಲುವ ಮತ್ತು ನ.27ರಂದು ನೆಡ್ಯಾಡಿಯ ಬಸವರಾಜ್ ಎಂಬುವವರನ್ನು ತಿಂದು ಹುಲಿ ತೇಗಿದೆ.

ಹುಲಿಯನ್ನು ಹಿಡಿಯಲು ವಿಫಲವಾಗಿರುವ ಅರಣ್ಯ ಇಲಾಖೆಯ ಮೇಲೆ ಗ್ರಾಮಸ್ಥರು ಹರಿಹಾಯುತ್ತಿದ್ದಾರೆ. ಚಿಕ್ಕಬರಗಿ ಗ್ರಾಮಸ್ಥರು ಅರಣ್ಯ ಇಲಾಖೆಯ ಶಿಬಿರವನ್ನು ಧ್ವಂಸ ಮಾಡಿ ಆಕ್ರೋಶ ಮೆರೆದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಹೊಣೆಗೇಡಿ ಸರಕಾರ, ಹುಲಿಯನ್ನು ಸೆರೆಹಿಡಿಯಲು ಸರ್ವಪ್ರಯತ್ನ ನಡೆಸಿರೆಂದು ಹೇಳುವ ಬದಲು ಕಂಡಲ್ಲಿ ಗುಂಡಿಕ್ಕಿ ಎಂದು ಹೇಳಿರುವುದು ಎಷ್ಟು ಸರಿ?

ಕರ್ನಾಟಕದಲ್ಲಿ ಹುಲಿಗಳೆಷ್ಟಿವೆ? : ಒಂದು ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ ಉಳಿದಿರುವುದು ಕೇವಲ 200 ಹುಲಿಗಳು ಮಾತ್ರ. ಇಪ್ಪತ್ತನೇ ಶತಮಾನದಲ್ಲಿ ದೇಶದಲ್ಲಿ 40 ಸಾವಿರದಷ್ಟು ಇದ್ದ ಹುಲಿಗಳು ಇಪ್ಪತ್ತೊಂದನೇ ಶತಮಾನದಲ್ಲಿ 1,700 ಹುಲಿಗಳು ಮಾತ್ರ ಉಳಿದುಕೊಂಡಿದೆ. ಇದನ್ನು ನೋಡಿದರೆ ಯಾವ ವೇಗದಲ್ಲಿ ಅಳಿವಿನ ಅಂಚಿಗೆ ಹುಲಿಗಳು ತಳ್ಳಲ್ಪಡುತ್ತಿವೆ. ಇನ್ನು ಕಂಡಲ್ಲಿ ಗುಂಡಿಕ್ಕಿ ಎಂದು ಆದೇಶ ನೀಡಿದರೆ ಹುಲಿ ಹಂತಕರಿಗೆ ಮುಕ್ತ ಆಹ್ವಾನ ನೀಡಿದಂತೆಯೇ ಸರಿ.

ಇಂದು ಹುಲಿ, ನಾಳೆ ಆಗಾಗ ದಾಳಿ ಇಡುತ್ತಿರುವ ಆನೆಗಳು, ಮುಂದೊಂದು ದಿನ ಮತ್ತೊಂದು ಕಾಡು ಪ್ರಾಣಿಯನ್ನು ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡುವುದಿಲ್ಲವೆಂದು ಏನು ಗ್ಯಾರಂಟಿ? ಪರಿಸರ ತಜ್ಞರು ಹೇಳುವುದೇನೆಂದರೆ, ಕಾಡಿನಲ್ಲಿ ಸಾಕಾಗುವಷ್ಟು ಆಹಾರ ಸಿಗದ ಕಾರಣ ಹುಲಿಗಳು ಕಾಡಿನಂಚಿನಲ್ಲಿರುವ ಗ್ರಾಮಗಳಿಗೆ ನುಗ್ಗಿ ದನ, ಕುರಿ, ಮೇಕೆಗಳನ್ನು ತಿನ್ನಲು ಬರುತ್ತಿವೆ. ದಾರಿಯಲ್ಲಿ ಮನುಷ್ಯ ಸಿಕ್ಕರೆ ಅವರ ಮೇಲೆಯೂ ದಾಳಿ ಮಾಡುತ್ತವೆ. ಒಂದು ಬಾರಿ ಮನುಜರ ರಕ್ತರ ರುಚಿ ಸಿಕ್ಕರೆ ಹುಲಿ ಬಿಟ್ಟೀತೆ?

ಅರಣ್ಯ ಇಲಾಖೆ ಈಗ ಮಾಡಬೇಕಾಗಿರುವುದೇನು? : ಸದ್ಯಕ್ಕೆ ಹುಲಿಯನ್ನು ಜೀವಂತವಾಗಿ ಹಿಡಿಯಲು ಸರ್ವರೀತಿಯ ಪ್ರಯತ್ನ ನಡೆಸಬೇಕು. ನಂತರ ಕಾಡು ನಾಶವಾಗದಂತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಬೇಕು. ಇರುವ ಕಾಡು ಕೂಡ ಕಳ್ಳರಿಗೆ ಬಲಿಯಾಗದೆ ಉಳಿಸಿಕೊಂಡರೆ ಸಾಕು. ಸರಕಾರಿ ಅಧಿಕಾರಿಗಳು ಕೂಡ ಆಸೆಬುರುಕತನ ಬಿಟ್ಟು ಕಾಡು ಉಳಿಯುವಂತೆ ರಕ್ಷಿಸಬೇಕು.

ಕೊನೆಯದಾಗಿ : ಮನುಷ್ಯರನ್ನು ತಿನ್ನುತ್ತಿರುವ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಲು ಆದೇಶವನ್ನೇನೋ ನೀಡಲಾಗಿದೆ. ಆದರೆ, ಅಕ್ರಮ ಗಣಿಗಾರಿಕೆ ನಡೆಸುತ್ತ ಕರ್ನಾಟಕದ ಅತ್ಯಮೂಲ್ಯ ಭೂಸಂಪತ್ತನ್ನು ಬರಿದು ಮಾಡುತ್ತಿರುವ ರಾಜಕಾರಣಿಗಳನ್ನು, ಅವರಿಗೆ ಬೆನ್ನೆಲುಬಾಗಿ ನಿಂತಿರುವ ಸರಕಾರಿ ಅಧಿಕಾರಿಗಳನ್ನು, ಅರಣ್ಯವನ್ನು ಬೋಳಿಸುತ್ತಿರುವ ಅಧಿಕಾರಿಗಳನ್ನು ಏನು ಮಾಡಬೇಕು? ಓದುಗರೇ ಇದಕ್ಕೆ ಉತ್ತರ ನೀಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+