ಮೈಸೂರಿನ ಮೂವರಿಗೆ ನಿಗಮ ಮಂಡಳಿ ಅಧ್ಯಕ್ಷ ಗಿರಿ
ಮೈಸೂರು, ಜುಲೈ 26: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವ ಹಿನ್ನೆಲೆಯಲ್ಲಿ ಮೈಸೂರು ಭಾಗದ ಮೂವರು ಬಿಜೆಪಿ ಮುಖಂಡರನ್ನು ನಿಗಮ, ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಸೋಮವಾರ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ 20 ನಿಗಮ, ಮಂಡಳಿಗಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. 2019ರಲ್ಲಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದ ವೇಳೆ ಹೊಸ ಸರಕಾರಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿತ್ತು . ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸಬರಿಗೆ ಅವಕಾಶ ಕೊಡುವ ನಿಟ್ಟಿಯಲ್ಲಿ ಜುಲೈ 12 ರಂದು 52 ಮಂದಿಯ ನೇಮಕಾತಿಯನ್ನು ರದ್ದುಗೊಳಿಸಿದ್ದರು.
ನೂತನಪಟ್ಟಿಯಲ್ಲಿ ಈ ಹಿಂದೆ ಅಧ್ಯಕ್ಷ ಸ್ಥಾನ ಹೊಂದಿದ್ದ ರಘು ಕೌಟಿಲ್ಯ, ಮಣಿರಾಜ ಶೆಟ್ಟಿ, ಕೆ.ವಿ. ನಾಗರಾಜ ಮತ್ತು ರೇವಣಪ್ಪ ಕೋಳಗಿಗೆ ಪುನಃ ಅವಕಾಶ ನೀಡಲಾಗಿದೆ. ಉಳಿದ ಸ್ಥಾನಗಳನ್ನು ಬಿಜೆಪಿ ಕಾರ್ಯಕರ್ತರಿಗೇ ನೇಮಕಾತಿಯಲ್ಲಿ ಅವಕಾಶ ನೀಡಲಾಗಿದೆ. ಮೈಸೂರಿನಲ್ಲಿ ಮೂವರಿಗೆ ಅವಕಾಶ ಸಿಕ್ಕಿದೆ.

ಮೈಲ್ಯಾಕ್‌ಗೆ ರಘು ಕೌಟಿಲ್ಯ; ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ರಘು ಕೌಟಿಲ್ಯ ನೇಮಕಗೊಂಡಿದ್ದಾರೆ. ಮೈಲ್ಯಾಕ್ ಆಡಳಿತ ಮಂಡಳಿಗೆ ರಘು ಕೌಟಿಲ್ಯ ಅವರನ್ನು ಅಧ್ಯಕ್ಷರು ಹಾಗೂ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿ ಸರಕಾರದ ಅಧೀನ ಕಾರ್ಯದರ್ಶಿ ಆರ್.ಮಂಜುಳಾ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಫಣೇಶ್ ಅಧ್ಯಕ್ಷರಾಗಿದ್ದರು. ರಘು ಕೌಟಿಲ್ಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಆದರೆ, ಮೈಸೂರು-ಚಾಮರಾಜನಗರದಿಂದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಚುನಾವಣೆಯಲ್ಲಿ ಸೋತಿದ್ದರು. ಆದರೂ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರಘು ಕೌಟಿಲ್ಯ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಆಪ್ತರು ಕೂಡ.
ಮೃಗಾಲಯ ಪ್ರಾಧಿಕಾರ; ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಜಿ ನಗರಾಧ್ಯಕ್ಷ ಎಂ. ಶಿವಕುಮಾರ್ ನೇಮಕಗೊಂಡಿದ್ದಾರೆ. ಬಿಜೆಪಿ ನಗರಾಧ್ಯಕ್ಷರಾಗಿ, ನಗರಪಾಲಿಕೆ ಸದಸ್ಯರಾಗಿ ಕೆಲಸ ಮಾಡಿರುವುದಲ್ಲದೇ ಹಲವು ವರ್ಷಗಳಿಂದ ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. "ಸರಕಾರವು ತಮ್ಮ ಪಕ್ಷ ನಿಷ್ಠೆಯನ್ನು ಗಮನಿಸಿ ಈ ಅವಕಾಶವನ್ನು ನೀಡಿದೆ. ಪಕ್ಷ ನೀಡಿರುವ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತೇನೆ" ಎಂದು ಎಂ. ಶಿವಕುಮಾರ್ ತಿಳಿಸಿದರು.
ವಸ್ತು ಪ್ರದರ್ಶನಕ್ಕೆ ಮಿರ್ಲೆ ಶ್ರೀನಿವಾಸ್ ಗೌಡ; ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾಗಿ ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ವಕ್ತಾರ ಮಿರ್ಲೆ ಶ್ರೀನಿವಾಸ್ ಗೌಡ ನೇಮಕಗೊಂಡಿದ್ದಾರೆ. ಕೆ. ಆರ್. ನಗರದ ಶ್ರೀನಿವಾಸ್ ಬಿಜೆಪಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಹೇಮಂತ್ ಕುಮಾರ್‌ಗೌಡ ಅವರಿಂದ ತೆರವಾದ ಸ್ಥಾನಕ್ಕೆ ನಿಯೋಜನೆಗೊಂಡಿದ್ದಾರೆ.












Click it and Unblock the Notifications