ಸಾವಯವ ಕೃಷಿ ಮಹತ್ವ ಸಾರಿದ ಕಿಸಾನ್ ಸ್ವರಾಜ್ ಸಮ್ಮೇಳನ
ಮೈಸೂರು,ನವೆಂಬರ್ 11: ನಗರದ ಕರಾಮುವಿವಿ ಆವರಣದಲ್ಲಿ ಹಮ್ಮಿಕೊಂಡಿರುವ ಮೂರು ದಿನ ಗಳ ರಾಷ್ಟ್ರಮಟ್ಟದ 5ನೇ ಕಿಸಾನ್ ಸ್ವರಾಜ್ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ಸಿಕ್ಕಿತು. ಕಾರ್ಯಕ್ರಮವನ್ನು ಬೀಜ ಸಂರಕ್ಷಕಿ ಪಾಪಮ್ಮ ಹಾಗೂ ಕೇರಳ ಕೃಷಿ ಸಚಿವ ಪ್ರಸಾದ್ ಉದ್ಘಾಟನೆ ಮಾಡಿದರು.
ಆಶಾ (ಅಲಯನ್ಸ್ ಫಾರ್ ಸಸ್ಟೈನಬಲ್ ಆ್ಯಂಡ್ ಹೊಲಿಸ್ಟಿಕ್ ಅಗ್ರಿಕಲ್ಚರ್) ಕಿಸಾನ್ ಸ್ವರಾಜ್ ಸಂಸ್ಥೆ ಆಯೋಜಿಸಿದ್ದ ಸಮ್ಮೇಳನದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಒಂದಕ್ಕಿಂತ ಒಂದು ವೈವಿಧ್ಯಮಯವಾಗಿದ್ದವು.
ಕಾರ್ಯಕ್ರಮದ ಮೊದಲ ದಿನವಾದ ಇಂದು ವೇದಿಕೆಯಲ್ಲಿ ಕೃಷಿ ದಿಗ್ಗಜರು ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಬಗ್ಗೆ ಸರಳ ವಿಧಾನದಲ್ಲಿ ಮಾಹಿತಿ ನೀಡಿದರು. ಮೇಳದಲ್ಲಿ 19 ರಾಜ್ಯದ ಮಳಿಗೆಗಳಿದ್ದವು. ಅದರಲ್ಲಿ ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದ ಗೆಡ್ಡೆ, ಗೆಣಸು ಮೇಳ, ಕೇರಳದ 100 ವಿಧದ ಬಾಳೆ ಹಣ್ಣಿನ ಪ್ರದರ್ಶನ, 9 ರಾಜ್ಯದ ವಿವಿಧ ಬಗೆಯ ಸಾವಯವ ಅಡುಗೆಗಳು ಗಮನ ಸೆಳೆದಿದ್ದವು. ಈ ಸಮ್ಮೇಳನದಲ್ಲಿ 200ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.
ದೇಶಿ ಬೀಜಗಳು, ಬಗೆಬಗೆಯ ಸಿರಿಧಾನ್ಯಗಳು, ಕೃಷಿ ಪುಸ್ತಕಗಳು, ಬಿದಿರಿನಿಂದ ಮಾಡಿದ ಬುಟ್ಟಿಗಳು, ನೈಸರ್ಗಿಕ ಐಸ್ ಕ್ರೀಂಗಳು, ಅಪರೂಪದ ಕೆಂಪು ಜೋಳ, ನಾನಾ ಬಗೆಯ ರಾಗಿ, ಭತ್ತಘಿ, ನೈಸರ್ಗಿಕ ಆಹಾರ, ಸಾವಯವ ಕೃಷಿ ಪರಿಕರಗಳು, ಹತ್ತಾರು ಬಗೆಯ ಅರಿಶಿನ, ಗೆಡ್ಡೆಗೆಣಸು, ಸೋರೆಕಾಯಿ, ಕುಂಬಳಕಾಯಿ, ನವಣೆ, ಸಜ್ಜೆ... ಹೀಗೆ ಎಲ್ಲವೂ ಮಳಿಗೆಯಲ್ಲಿ ಆಕರ್ಷಣೆ ಕೇಂದ್ರ ಬಿಂದುವಾಗಿದ್ದವು.

19 ರಾಜ್ಯದ ಮಾರಾಟಗಾರರು
ಸಮ್ಮೇಳನದಲ್ಲಿ ಕರ್ನಾಟಕದ ಬೆಳಗಾವಿ, ಹರಿಹರ, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ ಕೃಷಿ ಉತ್ಪನ್ನ ಮಾರಾಟಗಾರರು ಹಾಗೂ ಬೀಜ ಸಂರಕ್ಷರಲ್ಲದೆ, ಉತ್ತರಾಕಾಂಡ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ದೇಶದ ನಾನಾ ಭಾಗಗಳಿಂದ ನೈಸರ್ಗಿಕ ಮಾರಾಟಗಾರರು ತಮ್ಮ ಉತ್ಪನ್ನಗಳ ಜೊತೆ ಆಗಮಿಸಿದ್ದರು.

ಸಮ್ಮೇಳನದಲ್ಲಿ 75 ಬಗೆಯ ಬಾಳೆಹಣ್ಣು
ಬಾಳೆಯ ಲೋಕ ದೊಡ್ಡದು. ಪ್ರತಿ ತಳಿಯೂ ರುಚಿ, ಬಣ್ಣ, ಗಾತ್ರ ಮತ್ತು ಎತ್ತರದಲ್ಲಿ ವಿಭಿನ್ನ. ಇಂತಹ 75 ವಿಧದ ಬಾಳೆಹಣ್ಣನ್ನು ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಕಂಡುಬಂದವು. ಆಸ್ಟ್ರೇಲಿಯಾ, ಫಿಲಿಪೈನ್ಸ್, ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ದೇಶ-ವಿದೇಶಗಳ ಬಾಳೆ ತಳಿಗಳು ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಗಮನ ಸೆಳೆದವು

ನೈಸರ್ಗಿಕ ಗಡಿಯಾರ
ಸಮ್ಮೇಳನದಲ್ಲಿ ಗಮನ ಸೆಳೆಯುವ ಮತ್ತೊಂದು ಸಂಗತಿ ಎಂದರೆ ಬಿದಿರಿನ ಗಡಿಯಾರ. ಇದೊಂದು ಪರಿಸರ ಸ್ನೇಹಿ ಗಡಿಯಾರ. 800 ರೂ.ನಿಂದ 1200 ರೂ.ವರೆಗೆ ದರ ಇದೆ. ಕೆವಿನ್ ಆರ್ಟ್ ಗ್ಯಾಲರಿಯವರು ಇಂತಹದೊಂದು ವಿಶೇಷ ಗಡಿಯಾರದ ಮಳಿಗೆಯನ್ನು ತೆರೆದಿದ್ದಾರೆ.

ಗಮನ ಸೆಳೆದ ಅರಿಶಿನ ಎಣ್ಣೆ ಸೋಪು
ಶಿರಿಸಿ ಮೂಲದ ಕೃಷಿ ಉತ್ಪನ್ನ ಮಾರಾಟಗಾರೊಬ್ಬರು ಅರಿಶಿನದಿಂದ ತಯಾರಿಸಿದ ಸೋಪನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಶರೀರದ ಕಲೆಗಳು, ಮುಖದ ಕಪ್ಪುಗೆರೆ, ಮೊಡವೆ ಎಲ್ಲವನ್ನು ನಿವಾರಿಸಲು ಶುದ್ಧ ಅರಿಶಿನ ಎಣ್ಣೆಯಿಂದ ತಯಾರಿಸಿದ ಸಾಬೂನು ನೆರವಾಗಲಿದೆ. 80 ಕೆಜಿ ಅರಿಶಿನ ಹಾಕಿದರೆ ಒಂದು ಕೆಜಿ ಎಣ್ಣೆ ಸಿಗುತ್ತದೆ. ಒಂದು ಕೆಜಿ ಎಣ್ಣೆಯಿಂದ 80 ಸೋಪು ತಯಾರಿಸಬಹುದಂತೆ. ಸೋಪು ಹಚ್ಚಿ 5 ನಿಮಿಷಗಳ ನಂತರ ಮುಖ ತೊಳೆಯಬೇಕು ಎಂದು ಮಾರಾಟಗಾರರಾದ ಪಾಂಡುರಂಗ ಭಟ್ ಮಾಹಿತಿ ನೀಡಿದರು.
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪರಿಸರ ತಜ್ಞ ಯು.ಎನ್.ರವಿಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಿಸಾನ್ ಸ್ವರಾಜ್ ಸಮ್ಮೇಳನವನ್ನು ವೀಕ್ಷಣೆ ಮಾಡಿದರು.












Click it and Unblock the Notifications