ಮೈಸೂರಿನಲ್ಲಿ ಹೋಟೆಲ್ ಆರಂಭಿಸಲಿದೆ ಪ್ರತಿಷ್ಠಿತ ತಾಜ್ ಗ್ರೂಪ್
ಮೈಸೂರು, ಫೆಬ್ರವರಿ 11: ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ (ಜೆಎಲ್‌ಆರ್) ಅಡಿಯಲ್ಲಿರುವ ಮೈಸೂರಿನ ಪ್ರತಿಷ್ಠಿತ, ಐಷಾರಾಮಿ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಅನ್ನು ತಾಜ್ ಗ್ರೂಪ್ ತೆಗೆದುಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಆದರೂ ಸಹ ಮೈಸೂರು ನಗರದಲ್ಲಿ ಪ್ರತಿಷ್ಠಿ ತಾಜ್ ಗ್ರೂಪ್‌ನ ಹೋಟೆಲ್ ಆರಂಭವಾಗಲಿದೆ. ಈ ಮೂಲಕ ದೇಶ ಮತ್ತು ವಿದೇಶಿ ಪ್ರವಾಸಿಗರನ್ನು ಸೆಳೆಯಲಿದೆ.
ಟಾಟಾ ಸಮೂಹದ ಇಂಡಿಯನ್ ಹೋಟೆಲ್ಸ್ ಕಂಪನಿ (ಐಎಚ್‌ಸಿಎಲ್) ಪ್ರತಿಷ್ಠಿತ ತಾಜ್ ಬ್ರಾಂಡ್ ಅನ್ನು ಹೊಂದಿದೆ. ಮೈಸೂರು ನಗರದಲ್ಲಿ ಐಷಾರಾಮಿ ಹೋಟೆಲ್ ನಡೆಸಲು ಅದು ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಗ್ರೂಪ್ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ಅನ್ನು ನಿರ್ವಹಣೆ ಮಾಡಲಿದೆ.

ಇಂಡಿಯನ್ ಹೋಟೆಲ್ಸ್ ಕಂಪನಿ ವಸತಿ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. 4 ದ್ವೀಪಗಳು, 12 ದೇಶಗಳ 150ಕ್ಕೂ ಅಧಿಕ ಪ್ರದೇಶಗಳಲ್ಲಿ ಹೋಟೆಲ್‌ಗಳನ್ನು ಇದು ಹೊಂದಿದೆ. ಈ ಗ್ರೂಪ್ ಈಗ ಪ್ರತಿಷ್ಠಿತ ತಾಜ್ ಬ್ರಾಂಡ್ ಮೂಲಕ ಮೈಸೂರು ನಗರಕ್ಕೆ ಆಗಮಿಸಲಿದೆ.
ಒಪ್ಪಂದ ಖಚಿತಪಡಿಸಿದ ಹೋಟೆಲ್: ಮೈಸೂರು ನಗರದ ಎಂ. ಜಿ. ರಸ್ತೆಯಲ್ಲಿರುವ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ಒಡೆತನ ಡಿಎಂ ಸೌತ್ ಇಂಡಿಯಾ ಹಾಸ್ಪೆಟಾಲಿಟಿ ಒಡೆತನದಲ್ಲಿದೆ. ಈ ಒಪ್ಪಂದ ಮಾರ್ಚ್‌ನಲ್ಲಿ ಅಂತ್ಯಗೊಳ್ಳಲಿದೆ.
ಹೋಟೆಲ್ ನಿರ್ವಹಣೆಗಾಗಿ ಅವರು ಐಎಚ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಮಾರ್ಚ್ ಬಳಿಕ ಐಎಚ್‌ಸಿಎಲ್ ತಾಜ್ ಬ್ರಾಂಡ್ ಮೂಲಕ ಹೋಟೆಲ್ ನಿರ್ವಹಣೆ ಮಾಡಲಿದ್ದು, ಮುಂದಿನ ಆರು ತಿಂಗಳಿನಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು ಹೋಟೆಲ್ ತಾಜ್ ಗ್ರೂಪ್ ಸೇರಲಿದೆ.
ಈ ಹಿಂದಿನ ಮಾಹಿತಿಯಂತೆ ಐಎಚ್‌ಸಿಎಲ್ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ (ಜೆಎಲ್‌ಆರ್) ಅಡಿಯಲ್ಲಿರುವ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ತೆಗೆದುಕೊಳ್ಳಲು ಮುಂದಾಗಿತ್ತು. ಆದರೆ ಅದರ ಷರತ್ತುಗಳು, ನಿಯಮಗಳ ಕಾರಣ ಆ ತೀರ್ಮಾನದಿಂದ ಹಿಂದೆ ಸರಿಯಲಾಗಿದೆ.
ಈಗಾಗಲೇ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ (ಜೆಎಲ್‌ಆರ್) ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ಟೆಂಡರ್ ಕರೆದಿದೆ. ಹಲವು ಖಾಸಗಿ ಹೋಟೆಲ್‌ಗಳು ಈ ಕುರಿತು ಆಸಕ್ತಿ ತೋರಿಸಿವೆ. ಫೆಬ್ರವರಿ 18ರಂದು ಟೆಂಡರ್ ತೆರೆಯಲಾಗುತ್ತದೆ. ಐತಿಹಾಸಿಕ ಹೋಟೆಲ್ ನಿರ್ವಹಣೆ ಯಾರ ಪಾಲಾಗಲಿದೆ? ಎಂದು ಬಳಿಕ ತಿಳಿಯಲಿದೆ.
ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ಸಹ ನಗರದ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಹೋಟೆಲ್‌ನಲ್ಲಿಯೇ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು.
ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆಯನ್ನು ತಾಜ್ ಗ್ರೂಪ್ ಬೇಡ ಎನ್ನಲು ಕಾರಣವೇನು? ಎಂಬುದು ಪ್ರಶ್ನೆಯಾಗಿದೆ. ತಾಜ್ ಗ್ರೂಪ್ ನಮ್ಮ ಎಲ್ಲಾ ಷರತ್ತುಗಳಿಗೆ ಒಪ್ಪಿಗೆ ನೀಡಿದ್ದರೆ ಹೋಟೆಲ್ ನಿರ್ವಹಣೆಯನ್ನು ಅವರಿಗೆ ವಹಿಸಲು ನಾವು ತಯಾರಾಗಿದ್ದೆವು ಎಂದು ಜೆಎಲ್‌ಆರ್ ಹೇಳಿದೆ.
ನಾವು ಎಂದೂ ಸಹ ಹೋಟೆಲ್ ನಿರ್ವಹಣೆ ಅನುಮತಿಯನ್ನು ತಾಜ್ ಗ್ರೂಪ್‌ಗೆ ನೀಡಲು ನಿರಾಕರಿಸಿಲ್ಲ. ಈ ಹೋಟೆಲ್ ನಿರ್ಮಾಣ ಮಾಡಿದ್ದು ಮೈಸೂರು ರಾಜವಂಶಸ್ಥರು, ಅದನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಬರಲಾಗಿದೆ. ನಿರ್ವಹಣೆ ನೋಡಿಕೊಳ್ಳಲು ಕೆಲವು ಷರತ್ತುಗಳಿಗೆ ಒಪ್ಪಿಗೆ ನೀಡಲೇಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೈಸೂರಿನಲ್ಲಿ ಉದ್ಯಮ ಆರಂಭಿಸುವ ಕುರಿತು ಐಎಚ್‌ಸಿಎಲ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ 5.03 ಎಕರೆ ಪ್ರದೇಶದಲ್ಲಿ ನಮ್ಮ ಉದ್ಯಮ ಆರಂಭವಾಗಲಿದೆ. ಸದ್ಯ ಇರುವ ವ್ಯವಸ್ಥೆಗಳ ಜೊತೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ಹೋಟೆಲ್‌ನಲ್ಲಿ ನೀಡಲಾಗುತ್ತದೆ ಎಂದು ಹೇಳಿದೆ.












Click it and Unblock the Notifications