ಅತ್ಯಾಚಾರ ಆರೋಪ, ಸಿಎಂ ಆಪ್ತ ಪಕ್ಷದಿಂದ ಅಮಾನತು
ಮೈಸೂರು, ನ.4 : ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿರುವ ಹುಯಿಳಾಳು ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಹುಯಿಲಾಳು ರಾಮಸ್ವಾಮಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅತ್ಯಾಚಾರ ಪ್ರಕರಣ ದಾಖಲಾದ ತಕ್ಷಣ ರಾಮಸ್ವಾಮಿ ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪರಮಾಪ್ತ ಹುಯಿಲಾಳು ರಾಮಸ್ವಾಮಿ ಅವರನ್ನು ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಆರ್. ಪ್ರಕಾಶ್ ಕುಮಾರ್ ತಿಳಿಸಿದ್ದಾರೆ. ರಾಮಸ್ವಾಮಿ ಅವರ ವಿರುದ್ಧ ಲಕ್ಷ್ಮೀಪುರಂ ಠಾಣೆಯಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.

ಘಟನೆ ವಿವರ : ಬಿಳಿಕೆರೆ ಹೋಬಳಿ ಹುಯಿಲಾಳು ಗ್ರಾಮದ ನಿವಾಸಿ ರಾಮಸ್ವಾಮಿ (40) ತನ್ನ ಮೇಲೆ ಅತ್ಯಾಚಾರ ನಡೆಸಿ, ವಂಚನೆ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದಾಳೆ. ಇದರ ಅನ್ವಯ ಪೊಲೀಸರು, ರಾಮಸ್ವಾಮಿಯ ಬಂಧನಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ.
ಹುಯಿಲಾಳು ನಿವಾಸಿಯಾದ ರಾಮಸ್ವಾಮಿ ಅವರು ತಮ್ಮ ಪಕ್ಕದೂರಿನ ಕೂಲಿ ಕಾರ್ಮಿಕನ ಪುತ್ರಿಯೊಬ್ಬಳಿಗೆ, ಎರಡು ವರ್ಷದ ಹಿಂದೆ ಮೈಸೂರಿನ ಸರ್ಕಾರಿ ಕಾಲೇಜಿನಲ್ಲಿ ಬಿಎಸ್ಸಿಗೆ ಸೇರಲು ಹಾಗೂ ಹಾಸ್ಟೆಲ್‌ನಲ್ಲಿ ಸೀಟು ದೊರಕಿಸಿಕೊಡಲು ಸಹಾಯ ಮಾಡಿದ್ದರು.
ಇದೇ ವಿಶ್ವಾಸದಲ್ಲಿ ಯುವತಿಯ ಜತೆ ಆಗಾಗ್ಗೆ ಮಾತನಾಡುತ್ತಿದ್ದ ಅವರು, ಇತ್ತೀಚೆಗೆ ಆಕೆ ಓದುತ್ತಿದ್ದ ಕಾಲೇಜಿಗೆ ತೆರಳಿ, ಶಾಂತಲಾ ಚಿತ್ರಮಂದಿರದ ಸಮೀಪವಿರುವ ಹಾಸ್ಟೆಲ್‌ಗೆ ಬಿಡುವುದಾಗಿ ಹೇಳಿ, ಯುವತಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು.
ಕಾರಿನಲ್ಲಿ ಬರುವಾಗ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಮತ್ತು ಈ ವಿಷಯವನ್ನು ಬಹಿರಂಗ ಪಡಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬುದು ಆರೋಪವಾಗಿದೆ. ಯುವತಿಗೆ ಕೆ.ಆರ್. ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.











Click it and Unblock the Notifications