ಮೈಸೂರು: ಸಿಎಂ ಮನೆ ಮೇಲೆ ಕಲ್ಲು ತೂರಿದ ಆರೋಪಿ ಅರೆಸ್ಟ್
ಮೈಸೂರು, ಅಕ್ಟೋಬರ್, 11: ಶಾರದಾದೇವಿ ನಗರದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಮೇಲೆ ಕಿಡಿಗೇಡಿಯೊಬ್ಬ ಕಲ್ಲು ತೂರಾಟ ನಡೆಸಿದ್ದು, ತಕ್ಷಣ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಹೂಟಗಳ್ಳಿಯ ನಿವಾಸಿ ಸತ್ಯಮೂರ್ತಿ(48) ಬಂಧಿತ ಆರೋಪಿ. ಬೈಕ್‌ನಲ್ಲಿ ಸಿಎಂ ಮನೆ ಬಳಿ ಬಂದ ಸತ್ಯಮೂರ್ತಿ, ಚೀಲದಲ್ಲಿ ತುಂಬಿಕೊಂಡು ಬಂದಿದ್ದ ಕಲ್ಲುಗಳನ್ನು ಏಕಾಏಕಿ ಸಿಎಂ ಮನೆ ಮೇಲೆ ಎಸೆದಿದ್ದಾನೆ. ಇದರಿಂದ ಕಿಟಕಿಯ ಗಾಜುಗಳು ಪುಡಿಯಾಗಿವೆ. ತಕ್ಷಣ ಮನೆಯ ಒಳ ಆವರಣದಲ್ಲಿದ್ದ ಪೊಲೀಸರು ಹೊರ ಬಂದು ತಡೆಯಲು ಯತ್ನಸಿದಾಗ ಅವರ ಮೇಲೂ ಕಲ್ಲೆಸೆದು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ವಿಷಯ ತಿಳಿದ ವಿಜಯನಗರ ಠಾಣೆ ಪೊಲೀಸರು ಹೂಟಗಳ್ಳಿ ರಿಂಗ್ ರಸ್ತೆ ಬಳಿ ಬೆನ್ನತ್ತಿ ಹಿಡಿಯಲು ಪ್ರಯತ್ನಿಸಿದಾಗ ಆರೋಪಿ, ಅವರ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದಾನೆ. ನಂತರ ತಕ್ಷಣ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ. ಸಿಎಂ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇರೆಗೆ ಸರಸ್ವತಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರೆ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮತಯಂತ್ರ ಒಡೆದು ಹಾಕಿದ್ದ
ಕಳೆದ ವಿಧಾನಸಭೆ ಚುನಾವಣೆ ವೇಳೆ ಹೂಟಗಳ್ಳಿ ಮತಗಟ್ಟೆಗೆ ಮತದಾನಕ್ಕೆ ತೆರಳಿದ್ದ ಸತ್ಯಮೂರ್ತಿ, ಮತಯಂತ್ರವನ್ನು ಒಡೆದು ಹಾಕಿದ್ದ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಾಚ್ಯವಾಗಿ ನಿಂದಿಸಿ ಪೋಸ್ಟ್ ಮಾಡಿದ್ದ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿಯವರು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೂ ಬಂದು ಗಲಾಟೆ ಮಾಡಬಹುದು ಎಂದು ವಿಜಯನಗರ ಠಾಣೆ ಪೊಲೀಸರು, ಕಾರ್ಯಕ್ರಮ ಮುಗಿಯುವವರೆಗೂ ಆತನನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದರು.
ವಿಜಯನಗರ ಮತ್ತು ಜಯಲಕ್ಷ್ಮೀಪುರಂ ಠಾಣೆ ಪೊಲೀಸರ ವಿರುದ್ಧವೇ ಸತ್ಯಮೂರ್ತಿ, ಡಿಜಿಪಿ ಅವರಿಗೆ ಪತ್ರ ಬರೆದು ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯ ಮಾಡಿದ್ದನು. ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ದಸರಾಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ ಹೆಚ್.ಸಿ.ಮಹದೇವಪ್ಪ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಅಧಿಕೃತವಾಗಿ ಆಹ್ವಾನಿಸಿದರು.
ಬುಧವಾರ ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿ ಮಾಡಿ, ಶಾಲು ಹೊದಿಸಿ, ವಿಶೇಷ ಪುಷ್ಪಮಾಲಿಕೆಯೊಂದಿಗೆ ಸನ್ಮಾನಿಸಿ, ಫಲತಾಂಬೂಲದ ಜೊತೆಗೆ ಆಹ್ವಾನ ಪತ್ರಿಕೆ ನೀಡುವ ಮೂಲಕ ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಆತ್ಮೀಯವಾಗಿ ಕೋರಿದರು.
ಈ ವೇಳೆ ಮೇಯರ್ ಶಿವಕುಮಾರ್, ಶಾಸಕರಾದ ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications