ಸಿದ್ದರಾಮಯ್ಯ ಕುರಿತು ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿದ ಶ್ರೀರಾಮುಲು
ಮೈಸೂರು, ನವೆಂಬರ್ 30: ಸಿದ್ದರಾಮಯ್ಯ ಕುರಿತು ಬಿಜೆಪಿ ಸಚಿವ ಈಶ್ವರಪ್ಪ ನೀಡಿದ್ದ ಹೇಳಿಕೆಯನ್ನು ಶ್ರೀರಾಮುಲು ಖಂಡಿಸಿದ್ದಾರೆ.
ಈಶ್ವರಪ್ಪ ಅವರು ಸಿದ್ದರಾಮಯ್ಯ ಕುರಿತು ಮಾತನಾಡಿ, 'ಸಿದ್ದರಾಮಯ್ಯ ಇನ್ನೆಷ್ಟು ದಿನ ಬದುಕುತ್ತಾರೋ' ಎಂದು ಹೇಳಿದ್ದರು. ಸಿದ್ದರಾಮಯ್ಯ ಆದಷ್ಟು ಬೇಗ ಸಾಯುತ್ತಾರೆ ಎಂಬ ಅರ್ಥ ದ್ವನಿಸುವ ಮಾತುಗಳನ್ನು ಈಶ್ವರಪ್ಪ ಆಡಿದ್ದರು.
ಆದರೆ ತಮ್ಮದೇ ಪಕ್ಷದ ನಾಯಕರು ಆಡಿದ್ದ ಮಾತುಗಳನ್ನು ಖಂಡಿಸುವ ಧೈರ್ಯ ಪ್ರದರ್ಶಿಸಿರುವ ಶ್ರೀರಾಮುಲು, 'ಈಶ್ವರಪ್ಪ ಹೇಳಿಕೆ ಸರಿಯಲ್ಲ, ಚುನಾವಣೆ ವೈಯಕ್ತಿಕ ಟೀಕೆಗೆ ಬಳಕೆಯಾಗಬಾರದು, ಯಾರ ಕುಟುಂಬ, ಯಾರ ಸಾವಿನ ಬಗ್ಗೆಯೂ ಮಾತು ಬೇಡ' ಎಂದಿದ್ದಾರೆ.

'ಚುನಾವಣೆಯಲ್ಲಿ ಆರೋಪ-ಪ್ರತ್ಯಾರೋಪಗಳು ಸಾಮಾನ್ಯ, ಸಿದ್ದರಾಮಯ್ಯ, ಕುಮಾರಸ್ವಾಮಿ ನಮ್ಮ ಮೇಲೆ ಟೀಕ ಮಾಡಲಿ, ನಾವೂ ಮಾಡೋಣ ಆದರೆ ಕುಟುಂಬ ಮತ್ತು ಸಾವಿನ ಕುರಿತು ಮಾತು ಬೇಡ' ಎಂದು ಹೇಳಿದರು.
ಈಶ್ವರಪ್ಪ ಅವರು ರಾಣೆಬೆನ್ನೂರಿನಲ್ಲಿ ಮಾತನಾಡಿ, 'ಸಿದ್ದರಾಮಯ್ಯ ಇನ್ನೆಷ್ಟು ದಿನ ಬದುಕುತ್ತಾರೆ' ಎಂದು ಮಾತನಾಡಿದ್ದರು.
ಈ ಬಗ್ಗೆ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, 'ನನ್ನ ಸಾವು ಬಯಸುವ ಈಶ್ವರಪ್ಪ ನೂರು ಕಾಲ ಬಾಳಲಿ' ಎಂದು ಹೇಳಿದ್ದರು.
ಕೆಲವು ತಿಂಗಳುಗಳ ಹಿಂದೆ ಶ್ರೀರಾಮುಲು ಆಪ್ತ ಗಾಲಿ ಜನಾರ್ದನ ರೆಡ್ಡಿ ಸಂದರ್ಶನವೊಂದರಲ್ಲಿ ಮಾತನಾಡಿ, 'ನನ್ನ ವಿರುದ್ಧ ಕುತಂತ್ರ ಮಾಡಿ ನನಗೆ ಹಾನಿ ಮಾಡಿದ್ದಕ್ಕೆ ಸಿದ್ದರಾಮಯ್ಯ ಮಗ ಸತ್ತದ್ದು, ಅದು ಶಾಪ' ಎಂದು ಹೇಳಿದ್ದರು. ಇದು ಭಾರಿ ವಿವಾದ ಎಬ್ಬಿಸಿತ್ತು.












Click it and Unblock the Notifications