ಆಯುಧ ಪೂಜೆಯಂದು ಹೆಂಡಕ್ಕಾಗಿ ತಾಯಿಯನ್ನು ಬಲಿ ಪಡೆದ ಮಗ
ಕೆ.ಆರ್.ಪೇಟೆ, ಅಕ್ಟೋಬರ್ 24 : ಮದ್ಯಪಾನ ಮಾಡಲು ಹಣ ಕೊಡದ ವೃದ್ದ ತಾಯಿಯನ್ನು ಆಯುಧ ಪೂಜೆಯಂದು ಮಗನೇ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತಾಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಸಾಸಲುಕೊಪ್ಪಲು ಗ್ರಾಮದ ದಿವಂಗತ ನಾಗೇಗೌಡ ಅವರ ಪತ್ನಿ ನಿಂಗಮ್ಮ(70) ಮೃತಪಟ್ಟ ನತದೃಷ್ಟ ವೃದ್ದೆ. ಈಕೆಯ ಮಗ ಅಣ್ಣಪ್ಪ ಅಲಿಯಾಸ್ ಅಣ್ಣೇಗೌಡ(50) ಕೊಲೆ ಮಾಡಿದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ನಿಂಗಮ್ಮ ಅವರಿಗೆ ಮಂಜೇಗೌಡ ಮತ್ತು ಅಣ್ಣಪ್ಪ ಇಬ್ಬರು ಮಕ್ಕಳಿದ್ದು ಈಕೆ ಕಿರಿಯ ಮಗ ಅಣ್ಣಪ್ಪನೊಂದಿಗೆ ನಿಂಗಮ್ಮ ವಾಸವಿದ್ದರು. ಕುಡಿತದ ದಾಸನಾಗಿದ್ದ ಅಣ್ಣಪ್ಪ ಆಯುಧ ಪೂಜೆಯಂದು ತನ್ನ ತಾಯಿಯ ಬಳಿ ಹೆಂಡ ಸೇವಿಸಲು ಹಣ ಕೇಳಿದ್ದಾನೆ.

ಆಗ ತಾಯಿ ನಿಂಗಮ್ಮ ಹೆಂಡ ಕುಡಿಯದಂತೆ ಬುದ್ದಿ ಹೇಳಿದ್ದಾಳೆ. ಇದರಿಂದ ಕುಪಿತಗೊಂಡ ಅಣ್ಣಪ್ಪ ಮನೆಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ತಾಯಿಯ ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಕುರಿತು ಮೃತ ನಿಂಗಮ್ಮನ ಸೊಸೆ ಹಾಗೂ ಆರೋಪಿಯ ಪತ್ನಿ ಕೆ.ನಿಂಗಮ್ಮ ಕಿಕ್ಕೇರಿ ಪೊಲೀಸರಿಗೆ ನೀಡಿರುವ ದೂರು ನೀಡಿದ್ದರು. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಣ್ಣಪ್ಪನನ್ನು ಶ್ರವಣಬೆಳಗೊಳದಲ್ಲಿ ಪತ್ತೆ ಮಾಡಿ ಬಂಧಿಸಿದ ಪೊಲೀಸರು ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ನಾಗಮಂಗಲ ಡಿವೈಎಸ್‌ಪಿ ಸಿ.ಎನ್.ಜನಾರ್ಧನ್, ಸರ್ಕಲ್ ಇನ್ಸ್‌ಪೆಕ್ಟರ್ ಡಿ.ಯೋಗೇಶ್, ಸಬ್‌ಇನ್ಸ್‌ಪೆಕ್ಟರ್ ಜೆ.ಜೆ.ಯಶವಂತಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications