Snake Shyam:ಒಂದಲ್ಲ..ಎರಡಲ್ಲ.. ಬರೋಬ್ಬರಿ 86 ಸಾವಿರ ಹಾವುಗಳ ರಕ್ಷಣೆ ಮಾಡಿದ ಸ್ನೇಕ್ ಶ್ಯಾಮ್ ರೋಚಕ ಸ್ಟೋರಿ ಇಲ್ಲಿದೆ
ಮೈಸೂರು, ಜುಲೈ 18: ಮೊದಲೆಲ್ಲ ಹಾವುಗಳನ್ನು ಕಂಡಾಗ ಅವುಗಳನ್ನು ಹೊಡೆದು ಕೊಂದು ಹಾಕಿ ಬಿಡುತ್ತಿದ್ದರು. ಆದರೀಗ ಅವುಗಳ ಸಂರಕ್ಷಣೆಯತ್ತ ಜನ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ಕಾರಣ ಮೈಸೂರಿನ ಸ್ನೇಕ್ ಶ್ಯಾಮ್ ಎಂದರೆ ತಪ್ಪಾಗಲಾರದು. ಸ್ನೇಕ್ ಶ್ಯಾಮ್ ಅವರ ಜನಪ್ರಿಯತೆ ಮತ್ತು ಅವರ ಶ್ಲಾಘನೀಯ ಕಾರ್ಯಗಳಿಂದ ಇವತ್ತು ಎಲ್ಲೆಡೆ ಹಾವನ್ನು ಹಿಡಿದು ರಕ್ಷಿಸುವವರು ಸೃಷ್ಟಿಯಾಗಿದ್ದಾರೆ ಎನ್ನುವುದೇ ವಿಶೇಷ.
ಜನವಸತಿ ಪ್ರದೇಶಗಳು ವಿಸ್ತಾರವಾದಂತೆಲ್ಲ ಕಾಡಿನಲ್ಲಿದ್ದ ಜಂತುಗಳು ಸೇರಿದಂತೆ ಪ್ರಾಣಿ, ಪಕ್ಷಿಗಳು ನಾಡಿನತ್ತ ಬರಲಾರಂಭಿಸಿವೆ. ಹೀಗಿರುವಾಗ ಹಾವುಗಳು ಕೂಡ ನಗರಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಲಾರಂಭಿಸಿದ್ದು, ಅವುಗಳನ್ನು ನೋಡುತ್ತಿದ್ದಂತೆಯೇ ಜನ ಭಯಭೀತರಾಗುತ್ತಿದ್ದಾರೆ. ಆದರೆ ಹಾವುಗಳನ್ನು ನೋಡಿ ಭಯಬೀಳಬೇಡಿ, ಅವುಗಳಿಗೆ ತೊಂದರೆ ನೀಡಬೇಡಿ ಎಂಬುದಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಾ ಹಾವುಗಳ ರಕ್ಷಣೆಯನ್ನು ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಯುವ ಉರಗ ರಕ್ಷಕರಿಗೆ ಸ್ಪೂರ್ತಿ ಸ್ನೇಕ್ ಶ್ಯಾಮ್ ಆಗಿದ್ದಾರೆ.

ಇವತ್ತು ಸ್ನೇಕ್ ಶ್ಯಾಮ್ ಅವರ ಹೆಸರು ಮೈಸೂರಿನಿಂದ ಮೊದಲ್ಗೊಂಡು ರಾಜ್ಯ ರಾಷ್ಟ್ರಮಟ್ಟದಲ್ಲಿ ಪರಿಚಿತವಾಗಿದೆ. ಇನ್ನು ಮೈಸೂರಿನ ಜನರಿಗೆ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಶ್ಯಾಮ್. ಇವತ್ತು ನಮ್ಮ ಸುತ್ತಮುತ್ತ ಹಾವನ್ನು ರಕ್ಷಿಸುವವರು ಕಾಣಸಿಗುತ್ತಿರುವುದು ಮತ್ತು ಅವರೆಲ್ಲರೂ ತಮ್ಮ ಹೆಸರಿನ ಮುಂದೆ ಸ್ನೇಕ್ ಎಂಬ ಪದನಾಮ ಸೇರಿಸಿಕೊಳ್ಳುತ್ತಿದ್ದಾರೆ ಎಂದರೆ ಅದು ಸ್ನೇಕ್ ಶ್ಯಾಮ್ ಅವರ ಕೆಲಸದಿಂದ ಪ್ರೇರಿತಗೊಂಡು ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ.
1981ರಿಂದ ಹಾವುಗಳ ರಕ್ಷಣೆ ಕಾರ್ಯ
1981ರಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಸ್ನೇಕ್ ಶ್ಯಾಮ್ ಬದುಕು ನಡೆಸಲು ಮಕ್ಕಳನ್ನು ತನ್ನ ವಾಹನದಲ್ಲಿ ಶಾಲೆಗೆ ಬಿಡುವ ಕಾಯಕ ಮಾಡುತ್ತಿದ್ದರು. ನಂತರ ಮೈಸೂರು ನಗರಪಾಲಿಕೆ ಸದಸ್ಯರಾದರು. ಇದುವರೆಗೆ ಇವರು ಹಿಡಿದ ಹಾವುಗಳ ಸಂಖ್ಯೆ ಸುಮಾರು 86 ಸಾವಿರದಷ್ಟಿದೆ. ಇವತ್ತಿಗೂ ಕಷ್ಟಕಾಲದಲ್ಲಿ ಅವರ ಕೈ ಹಿಡಿದ ಆಟೋ ಡ್ರೈವರ್ ಕೆಲಸವನ್ನು ನೆನಪಿಸಿಕೊಳ್ಳುತ್ತಾರೆ.
ಇವತ್ತು ಹಾವು ಹಿಡಿಯುವ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಸ್ನೇಕ್ ಶ್ಯಾಮ್ ಎಂದೇ ಚಿರಪರಿಚಿತರಾಗಿದ್ದಾರೆ. ಇವರಿಗೆ ಇರುವ ಹಾವಿನ ಮೇಲಿನ ಪ್ರೀತಿ ಮತ್ತು ಅವರ ವೇಷಭೂಷಣಗಳು ವಿಭಿನ್ನವಾಗಿ ಜನರನ್ನು ಆಕರ್ಷಿಸುತ್ತಿದ್ದು, ಈ ಜನಪ್ರಿಯತೆ ಅವರನ್ನು ಮೈಸೂರು ಮಹಾನಗರಪಾಲಿಕೆ ಸದಸ್ಯನನ್ನಾಗಿ ಮಾಡಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಿಂದೆ ಹಾವುಗಳನ್ನು ಮನೆಯ ಸುತ್ತಮುತ್ತ ಕಂಡಾಗ ಜನ ಭಯಭೀತರಾಗಿ ಅದನ್ನು ಹೊಡೆದು ಸಾಯಿಸಿಬಿಡುತ್ತಿದ್ದರು. ಇದನ್ನು ನೋಡುತ್ತಿದ್ದ ಶ್ಯಾಮ್ ಅವರಿಗೆ ಹಾವುಗಳ ಮಾರಣಹೋಮವನ್ನು ತಪ್ಪಿಸುವುದು ಹೇಗೆ ಎಂಬ ಚಿಂತೆ ಕಾಡಿತ್ತು. ಅಲ್ಲದೆ ಮನೆಗೆ ಬರುವ ಹಾವುಗಳನ್ನು ಹೊಡೆದು ಕೊಲ್ಲುವ ಬದಲು ಸೆರೆ ಹಿಡಿದು ಕಾಡಿಗೆ ಬಿಟ್ಟರೆ ಹೇಗೆ ಎಂಬ ಆಲೋಚನೆ ಬಂದಿತ್ತು. ಕೂಡಲೇ ಅವರು ಅದನ್ನು ಕಾರ್ಯರೂಪಕ್ಕೆ ತರಲು ಮುಂದಾದರು.
1997ರಿಂದ ಹಾವುಗಳ ನೋಂದಣಿ
1981ರಿಂದಲೇ ಹಾವನ್ನು ಹಿಡಿದು ಕಾಡಿಗೆ ಬಿಡುವ ಕೆಲಸವನ್ನು ಅವರು ಆರಂಭಿಸಿದರೂ ಅದನ್ನು ನಮೂದಿಸುವ ಕಾರ್ಯವನ್ನು ಕೈಗೊಂಡಿದ್ದು 1997ರಲ್ಲಿ. ಅಲ್ಲಿಂದೀಚೆಗೆ ಅವರು ಹಾವು ಹಿಡಿಯಲು ಹೋಗುವ ಸಂದರ್ಭ ತಮ್ಮೊಂದಿಗೆ ರಿಜಿಸ್ಟರ್‌ನ್ನು ಹಿಡಿದುಕೊಂಡು ಹೋಗುತ್ತಾರೆ. ಹಾವು ಹಿಡಿದ ಬಳಿಕ ತಾವು ಹಿಡಿದ ಹಾವಿನ ಬಗ್ಗೆ, ಎಲ್ಲಿ ಹಿಡಿದಿದ್ದು ಎಂಬುವುದರ ಕುರಿತು ವಿವರವಾಗಿ ಬರೆದು ಸಂಬಂಧಿಸಿದವರಿಂದ ಸಹಿ ಪಡೆಯುತ್ತಾರೆ.
ಇವರು ಕೇವಲ ಹಾವುಗಳನ್ನು ಮಾತ್ರ ಹಿಡಿಯುವುದಲ್ಲದೆ, ಹಾವಿನ ಬಗ್ಗೆ ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸುವ ಕಾರ್ಯಗಳನ್ನು ಮಾಡುತ್ತಾರೆ. ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಉಪನ್ಯಾಸ ನೀಡಿ ಅವರಲ್ಲಿರುವ ಆತಂಕವನ್ನು ದೂರ ಮಾಡಿ ಧೈರ್ಯ ತುಂಬುವ ಕೆಲಸವನ್ನು ಕೂಡ ಮಾಡುತ್ತಾ ಬಂದಿದ್ದಾರೆ.
ನ್ಯಾಷನಲ್ ಜಿಯೋಗ್ರಫಿಯಲ್ಲಿ ಪ್ರಸಾರ
ಹೊಟ್ಟೆಪಾಡಿಗೆ ತನ್ನದೇ ಆದ ವೃತ್ತಿಯನ್ನು ಮಾಡುತ್ತಿರುವ ಅವರು ಪ್ರವೃತ್ತಿಯಾಗಿ ಹಾವು ಹಿಡಿಯುವ ಕಾಯಕವನ್ನು ರೂಢಿಸಿಕೊಂಡಿದ್ದಾರೆ. ಆದರೆ ಕರೆ ಬಂದ ತಕ್ಷಣ ಸ್ವಂತ ಖರ್ಚಿನಲ್ಲಿ ತೆರಳಿ ಮನೆಗಳಲ್ಲಿ ಅವಿತು ಕೊಂಡಿರುವ ಹಾವುಗಳನ್ನು ಸೆರೆಹಿಡಿಯುವುದು ಸುಲಭದ ಕೆಲಸವಲ್ಲ. ಆದರೂ ನಿಷ್ಠೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಇವರು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ನ್ಯಾಷನಲ್ ಜಿಯೋಗ್ರಫಿ ಚಾನಲ್ ಇವರ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿದೆ. ಹಲವಾರು ಸಂಘ ಸಂಸ್ಥೆಗಳು ಇವರ ಕಾರ್ಯವನ್ನು ಮೆಚ್ಚಿ ಸನ್ಮಾನಿಸಿವೆ.
ಇನ್ನು ಪ್ರತಿವರ್ಷವೂ ಮೈಸೂರು ದಸರಾದಲ್ಲಿ ವಿಭಿನ್ನ ಉಡುಗೆತೊಟ್ಟು ಜನರ ಗಮನಸೆಳೆಯುವುದು ಇವರ ವಿಶೇಷತೆಯಾಗಿದೆ. ಒಟ್ಟಾರೆ ಮೈಸೂರಿನ ಸ್ನೇಕ್ ಶ್ಯಾಮ್ ಅವರು ತಮ್ಮ ಹಲವು ಜನಮುಖಿ ಕೆಲಸ ಕಾರ್ಯದಿಂದ ಗಮನಸೆಳೆಯುತ್ತಿದ್ದು, ಇದು ಹೀಗೆಯೇ ಮುಂದುವರೆಯಲಿ ಎನ್ನುವುದು ನಮ್ಮ ಆಶಯವಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications