ಕೃಷ್ಣರ 'ದೂರಾಲೋಚನೆ' ಹೇಳಿಕೆಗೆ ಸಿದ್ದು ತಿರುಗೇಟು
ಎಸ್.ಎಂ.ಕೃಷ್ಣ ಅವರ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕೇನು ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಲಿ ಎಂದರು.
ಮೈಸೂರು, ಏಪ್ರಿಲ್ 4 : ತಾವು ಮುಖ್ಯಮಂತ್ರಿ ಆಗಿದ್ದಾಗ ಎಂಥ ಸರ್ಕಾರ ಇತ್ತು ಎಂಬುದನ್ನು ಎಸ್.ಎಂ.ಕೃಷ್ಣ ಅವರು ಒಮ್ಮೆ ನೆನಪಿಸಿಕೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್.ಎಂ.ಕೃಷ್ಣ ಅವರಿಗೆ ತಿರುಗೇಟು ನೀಡಿದ್ದಾರೆ.
ಏಪ್ರಿಲ್ 9, ಭಾನುವಾರದಂದು ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ಬೆರಳೆಣಿಕೆಯಷ್ಟೇ ದಿನಗಳು ಬಾಕಿ ಇರುವುದರಿಂದ ಉಭಯ ಪಕ್ಷಗಳ ನಾಯಕರೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.[84ರ ಪ್ರಾಯದಲ್ಲಿ ಮದುವೆ ಆಗೋಕೆ ಸಾಧ್ಯವೇ: ಕೃಷ್ಣಗೆ ಇಬ್ರಾಹೀಂ ಲೇವಡಿ]

ನಿನ್ನೆಯಿಂದ (ಏಪ್ರಿಲ್ 3) ಬಿಜೆಪಿ ಪರ ಪ್ರಚಾರ ಕಾರ್ಯ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, 'ಸಿದ್ದರಾಮಯ್ಯ ಸರ್ಕಾರಕ್ಕೆ ದೂರದೃಷ್ಟಿಯಿಲ್ಲ' ಎಂದಿದ್ದರು. ಕೃಷ್ಣ ಅವರ ಮಾತಿಗೆ ಇಂದು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕಳೆದ 45 ವರ್ಷಗಳಲ್ಲಿ ಇಂತಹ ಕೆಟ್ಟ ಸರ್ಕಾರ ನೋಡಿಲ್ಲ, ಸರ್ಕಾರಕ್ಕೆ ದೂರಾಲೋಚನೆ ಇಲ್ಲ ಎಂದ ಕೃಷ್ಣ ಅವರ ಮಾತಿಗೆ ಅರ್ಥವಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದರು.[ಸಿದ್ದರಾಮಯ್ಯ ಸರ್ಕಾರಕ್ಕೆ ದೂರದೃಷ್ಟಿ ಇಲ್ಲ: ಕೃಷ್ಣ ಟೀಕೆ]
ಕೃಷ್ಣ ಅವರು ಹಿರಿಯ ನಾಯಕರು. ಅವರ ದೂರಾಲೋಚನೆ ಕುರಿತು ನನ್ನ ತಕರಾರು ಇಲ್ಲ. ಅವರ ಸರ್ಕಾರ ಇದ್ದಾಗ 30 ಮಂತ್ರಿಗಳು ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್ ಶಾಸಕರ ಸಂಖ್ಯೆ 140ರಿಂದ 60ಕ್ಕೆ ಇಳಿಯಿತು. ಆಗ ಎಂತಹ ದೂರಾಲೋಚನೆಯ ಮತ್ತು ಒಳ್ಳೆಯ ಸರ್ಕಾರ ಇತ್ತು ಎಂಬುದನ್ನು ಕೃಷ್ಣ ಅವರು ನೆನಪು ಮಾಡಿ ಕೊಳ್ಳಲಿ ಎಂದು ವ್ಯಂಗ್ಯವಾಗಿ ನುಡಿದರು.
ಉಪಚುನಾವಣೆ ಕಣದ ರಂಗು ದಿನೇ ದಿನೇ ಹೆಚ್ಚುತ್ತಿದ್ದು, ಏಪ್ರಿಲ್ 13 ರಂದು ಹೊರಬೀಳಲಿರುವ ಫಲಿತಾಂಶದ ಕಡೆ ಎಲ್ಲರ ಕುತೂಹಲ ಹರಿದಿದೆ. ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರನ್ನು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಎದುರಿಸಲಿದ್ದರೆ, ಗುಂಡ್ಲೆಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್ ಎದುರಿಸಲಿದ್ದಾರೆ.












Click it and Unblock the Notifications