ಬೆಂಗಳೂರು- ಮೈಸೂರು ಹೆದ್ದಾರಿಗೆ ಕಾಂಗ್ರೆಸ್ ಕೊಡುಗೆ ಏನು ಅನ್ನುವುದನ್ನ ಸಿದ್ದರಾಮಯ್ಯ ಜನರಿಗೆ ತಿಳಿಸಲಿದ್ದಾರೆ: KPCC ವಕ್ತಾರ
ಸಿದ್ದರಾಮಯ್ಯ ಮತ್ತು ಮಾಜಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗುರುವಾರ (ಮಾರ್ಚ್ 9) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಅನ್ನು ಪರಿಶೀಲನೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೈಸೂರು, ಮಾರ್ಚ್, 09: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗುರುವಾರ (ಮಾರ್ಚ್ 9) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಅನ್ನು ಪರಿಶೀಲನೆ ಮಾಡಲಿದ್ದಾರೆ. ಹಾಗೆಯೇ ಈ ರಸ್ತೆ ನಿರ್ಮಾಣಕ್ಕೆ ಕಾಂಗ್ರೆಸ್ ಕೊಡುಗೆಯನ್ನು ದಾಖಲೆ ಸಮೇತ ಜನತೆಗೆ ತಿಳಿಸಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾಹಿತಿ ನೀಡಿದ್ದಾರೆ.
ಎಕ್ಸ್‌ಪ್ರೆಸ್ ವೇಗೆ ಖರ್ಚಾದ ಹಣ ಎಷ್ಟು?
ಎಕ್ಸ್‌ಪ್ರೆಸ್ ವೇಗೆ 9,150 ಕೋಟಿ ರೂಪಾಯಿ ಖರ್ಚಾಗಿದೆ. ಕಾಂಗ್ರೆಸ್ 9 ಪೈಸೆ ಕೊಟ್ಟಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ದಾಖಲೆ ಬಿಡುಗಡೆಯ ಬಳಿಕ ಸಂಸದರು ತಮ್ಮ ಮಾತಿಗೆ ಬದ್ಧರಾಗಿ ರಾಜೀನಾಮೆ ಸಲ್ಲಿಸುವಂತೆ ಒತ್ತಾಯಿಸುತ್ತೇವೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಟೀ, ಕಾಫಿ, ಬಿಸ್ಕೆಟ್‌ಗೆ 200 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮೈಸೂರಿನ ಎನ್.ಆರ್.ರಮೇಶ್ ಆರೋಪ ಮಾಡಿದ್ದಾರೆ. ಹಾಗಿದ್ದರೆ ಅವರು ದಾಖಲೆ ಸಲ್ಲಿಸಬೇಕು ಎಂದು ಚಾಲೆಂಜ್ ಹಾಕಿದ್ದಾರೆ.
ಬಿಜೆಪಿ ವಿರುದ್ಧ ಡಿ.ಕೆ.ಸುರೇಶ್ ಕೆಂಡಾಮಂಡಲ
ಬಿಜೆಪಿಯವರಿಗೆ ಸಂವಿಧಾನದದ ಬಗ್ಗೆ ಗೌರವ ಇಲ್ಲ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇ ಉದ್ಘಾಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅಧಿಕೃತ ಆಹ್ವಾನವೂ ಬಂದಿಲ್ಲ. ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಬಿಜೆಪಿ ಸರ್ಕಾರದ ಕಾರ್ಯಕ್ರಮನಾ? ಎಂದು ಪ್ರಶ್ನಿಸುವ ಮೂಲಕ ಸಂಸದ ಡಿ.ಕೆ.ಸುರೇಶ್ ಕನಕಪುರದಲ್ಲಿ ವಾಗ್ದಾಳಿ ನಡೆಸಿದ್ದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯನ್ನು ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡುತ್ತಿರುವ ಬಗ್ಗೆ ಕನಕಪುರದಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್, ನನಗೆ ಅಧಿಕೃತ ಆಹ್ವಾನ ಇನ್ನೂ ಬಂದಿಲ್ಲ. ಬಿಜೆಪಿಗೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ. ಎಲ್ಲವನ್ನೂ ನಾವೇ ಮಾಡಿದ್ದು ಅನ್ನುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕೆ ಎಲ್ಲರಿಂದಲೂ ಸಹಕಾರ ಸಿಕ್ಕಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದ ಸಮಯದಲ್ಲಿ ಭೂ ಸ್ವಾಧೀನ ಕಾಯ್ದೆ ಜಾರಿ ಮಾಡಿಲ್ಲ ಅಂದಿದ್ದರೆ ಇವರು ರಸ್ತೆ ಮಾಡುವುದಕ್ಕೆ ಆಗುತ್ತಿರಲಿಲ್ಲ. ಸಿದ್ದರಾಮಯ್ಯನವರ ಕಾಲದಲ್ಲಿ ರಸ್ತೆಗೆ ಸಾಕಷ್ಟು ಸಹಕಾರ ನೀಡಲಾಗಿದೆ. ಹೀಗೆ ಹೆದ್ದಾರಿ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಡಿ.ಕೆ.ಸುರೇಶ್ ಸ್ಮರಿಸಿಕೊಂಡರು.












Click it and Unblock the Notifications